Index   ವಚನ - 11    Search  
 
ಗುರುಕೃಪಾವಸ್ಥೆಯನು ಪಡೆದು ಅಂತರಮಾರ್ಗದಲ್ಲಿ ನಿಶ್ಚಿಂತನಿವಾಸಿಗಳಾದ ಮಹಾಮಹಿಮರ ಮನದ ದಂದುಗವನು ಸ್ವಾನುಭಾವಜ್ಞಾನವೆಂಬ ಮನೆದೈವ, ಶಿವಾನುಭಾವ, ಓಂ ಬೀಜಾಕ್ಷರವೆ ಅಂತರ್ಭಾವ, ಆದಿ ಪರಾಶಕ್ತಿ ಅನಾದಿ ಪರಶಿವನೆಂಬ ಮೂಲಮಂತ್ರವೆ ಗುಪ್ತಪ್ರಣಮದ ಬಲೆಯಲ್ಲಿ ಮನೋನ್ಮಯ ತನ್ಮಯದ ಲೀಲೆ. ಆನಂದಮಯವಾಗಿ ಧ್ಯಾನ ಮೌನವೆಂಬ ಸನ್ಮೃದುವಾಕ್ಯಗಳಿಂದ ಉತ್ತರದಿಕ್ಕಿನಲ್ಲಿ ಕುಳಿತು, ಕತ್ತಲು ಬೆಳಕೆನ್ನದೆ ತೊತ್ತಿನ ಮಗನಬಹುದೆಂದು ಯತ್ನವಿಲ್ಲದೆ ಪ್ರಯತ್ನಮಂಬಟ್ಟು, ತೆತ್ತೀಸಕೋಟಿ ದೇವಾನುದೇವತೆಗಳೊಡಗೂಡಿ ಮಿತ್ರಬಾಂಧವರನೆಲ್ಲ ಒಕ್ಕಲಿಕ್ಕಿ ಕೂ ಎಂದು ಕೂಗಲು, ಅಜ್ಜ ಮುತ್ತ್ಯಾ ಮೊಮ್ಮಗನೊಡನೆ ಗೆಳೆಯ ಸಾಲವಳಿಯು ಬಹುದಿನ ಸಾಗಿ, ಅಳಿಯ ಮಾನದವನೆಂದುಕೊಂಡು, ಕುಲಕೋಟಿ ಬಳಗವೆಲ್ಲ ಅರಳಿ ಜೋಳಕ್ಕೆ ಮಾರಿ ಮಾರಿ, ಅರಳಿ ಅಂಬಲಿ ಕಾಸಿದಡುಗೆಯನು ಅಂಗವಿಲ್ಲದ ಲಿಂಗದೇಹಿಗಳೊಡನೆ ತತ್ಸಂಗದಿಂದ ಉಣನೀಡಿ, ಭೃಂಗ ಸಂಪಿಗೆ ಮರೆಯಲ್ಲಿರ್ದು ಅಂತೆ ಗಂಗಾಸಮುದ್ರವೆಂಬ ಸಾಗರದಲ್ಲಿ ಅಡಗಿರ್ದ ತೆರನಂತೆ ಅನಂಗಸಂಗ ಸುಖಭೋಗಿ. ನಿಜಗುಣತ್ಯಾಗಿ ನೀನೆ ಎನ್ನೊಳಡಗಿರ್ದೆಯಲ್ಲ[ವೆ], ನಿಜಗುರು ನಿರಾಲಂಬಪ್ರಭುವೆ. ಶ್ರೀ ಗುರು ಕೃಪಾವಸ್ಥೆ ಸೂಚನಾರ್ಥಂ ಸಂಪೂರ್ಣಂ ಮಂಗಳಮಸ್ತು ಶ್ರೀ ಶ್ರೀ ಶ್ರೀ ಧರ್ಮಾರ್ಥನ್ಯಾಯದಿಂ ಅನುಸ್ಮರಣೆಯಂ ಮಾಡಲೋಸುಗ ಪ್ರಪಂಚವೆಂಬ ದೂರ ಆಚಾರ ಮಾರ್ಗದಲಿ ಮಾಯಾ ಸಂಶಯ ವಶಗತದಿಂದ ರಾಯಭಾರವ ಮಾಡದೆ, ಗುರುಬೋಧತ್ರಯ ವಿವರವೆಲ್ಲವನು ಭಕ್ತಿಜ್ಞಾನಾನಂದಮಯವಾಗಿ ಮಾರ್ಗಾಚರಣೆಯಲ್ಲಿ ಸಮಯೋಚಿತಾರ್ಥಮಂ ಅರ್ಥಜ್ಞಾನದಿಂದನುಭವಿಸಲು ಸರ್ವಾರ್ಥನ್ಯಾಯಮಂ ಯಾಕೆ ಬೇಕು. ನೂಕು ತಾಕು ಮಾಡಯ್ಯ, ಗುರುವೆ ಎನ್ನ ಅರಿವೆ ಜಗದ್ಗುರುವೆ. ಮತ್ತಂ ನೀನೆಂಬುದೆ ಸಾಧನ. ಗುಪ್ತ ಭಾವಾರ್ಥಮಂ ಸೂಕ್ಷ್ಮದೊಳಗಣ ಸ್ಥೂಲವನು ಅಡಗಿದ ಪರಿತಾರ್ಥನ್ಯಾಯಮಂ ಮಾಹಾಗುರು ಪೇಳ್ದನು || ವಚನ||