Index   ವಚನ - 42    Search  
 
ಪೃಥ್ವಿಗುಣದಿಂದನುಭವಿಸುವಂಥದು ತಪ್ಪು ಎನ್ನೊಳಗಿಲ್ಲವು. ಅಪ್ಪುವಿನಾಚರಣೆಯನು ಆವಾವ ತೆರನಾದ ಬಳಿಕ ಕಪ್ಪುಹತ್ತುವುದೆನಗೆಂತು! ತುಪ್ಪವದು ಹಾಲಿನಿಂದುದ್ಭವಿಸಲು ಮತ್ತೆ ಹಾಲಾಗುವುದೆಂತಯ್ಯ. ಉಪ್ಪು ಅಪ್ಪುವಿನ ಕೂಡಲು ಉಪ್ಪಿಗೆ ಕಿಟ್ಟು ಬಂದಂತೆ, ಉಪ್ಪುಗುರಿಗಾಗುವುದೆಂತಯ್ಯಾ, ಅಪ್ಪಯ್ಯಾ ಕಾಡಸೊಪ್ಪು ಅಪ್ಪಿಕೊಂಡು ನೆನಪು ನೆಲೆಯಿಲ್ಲದೆ, ಅಜ್ಞಾನವನು ಮುಪ್ಪು ಆವರಿಸಲು, ಒಪ್ಪುಗೂಡುವುದು ದುರ್ಲಭವು. ತೇಜ ಬೆಳಗಿನಿಂದ ರಾಜಸಭೆಯಲ್ಲಿ ಕುಳಿತು ತಪ್ಪು ನಡೆನುಡಿಯಿಂದಾಚರಿಸಲು ವಾಯುವೆಂಬ ಉಪದ್ರವದಿಂದ ಸೋಜಿಗರೂಪವಾಗುವುದೆಂತಯ್ಯಾ! ಬೈಲಾಕಾರವಾದ ನಿಮಿತ್ತ ಅಲ್ಪಾಶ್ರಯಮಂ ತಾಪತ್ರಯವೆ ಸಾಕ್ಷೀಭೂತವಾಗಿ ಕಾಡುತ್ತಿರ್ಪುದು. ದೀಪ್ತವಾದ ರುಚಿಗೊಂದು ತಪ್ಪುಗಾಣಿಕೆಯನು ಕೊಟ್ಟು, ಗುಪ್ತನಾಗಿ ಅನುಭವಿಸುವಂಥದು, ನಿಜಾಶ್ರಯಮಾದ ಆಕಾಶವೆಂದು ಹೇಳಲ್ಪಟ್ಟಿತ್ತು, ಬಪ್ಪದು ತಪ್ಪದು, ಬಾರದು ಬಪ್ಪದು, ಅಪ್ಪಯ್ಯ ಶ್ರೀಗುರುವೆ ಎನ್ನ ತಪ್ಪುತಡಿ ನಿನ್ನೊಳಗಲ್ಲವೆ, ಎಲೆ ಲಿಂಗವೆ ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ. || ಗುರು ಶಿಷ್ಯ ನಿರೂಪ ಸಮಾಪ್ತ||