Index   ವಚನ - 5    Search  
 
ನಾನಾ ಯೋನಿಯಲ್ಲಿ ಬಂದು ಫಲವೇನಯ್ಯಾ ಪುಣ್ಯಪಾಪವೆಂದರಿಯದನ್ನಕ್ಕ. ಪುಣ್ಯಪಾಪವೆಂದರಿದಲ್ಲಿ ಫಲವೇನಯ್ಯಾ ಶಿವಭಕ್ತನಾಗದನ್ನಕ್ಕ. ಶಿವಭಕ್ತನಾದಲ್ಲಿ ಫಲವೇನಯ್ಯಾ ಲಿಂಗಜಂಗಮವೆಂದರಿಯದನ್ನಕ್ಕ. ಲಿಂಗಜಂಗಮವೆಂದರಿದಲ್ಲಿ ಫಲವೇನಯ್ಯಾ ಭವಿಯ ಕೊಳುಕೊಡೆ ಹಿಂಗದನ್ನಕ್ಕ. ಭವಿಯ ಕೊಳುಕೊಡೆ ಹಿಂಗಿದಲ್ಲಿ ಫಲವೇನಯ್ಯಾ ಆಶೆಯಾಮಿಷವಳಿಯದನ್ನಕ್ಕ. ಆಶೆಯಾಮಿಷಂಗಳಳಿದಲ್ಲಿ ಫಲವೇನಯ್ಯಾ ಸಮತೆ ನೆಲೆಗೊಳ್ಳದನ್ನಕ್ಕ. ಸಮತೆ ನೆಲೆಗೊಂಡಲ್ಲಿ ಫಲವೇನಯ್ಯಾ ಮೂರುಬಟ್ಟೆಯನರಿಯದನ್ನಕ್ಕ. ಮೂರುಬಟ್ಟೆಯನರಿದಲ್ಲಿ ಫಲವೇನಯ್ಯಾ ಅಷ್ಟಮದಂಗಳು ಬೆಂದು ನಷ್ಟವಾಗದನ್ನಕ್ಕ. ಅಷ್ಟಮದಂಗಳು ಬೆಂದು ನಷ್ಟವಾದಲ್ಲಿ ಫಲವೇನಯ್ಯಾ ಅಮರಗುಂಡದ ಮಲ್ಲಿಕಾರ್ಜುನದೇವರಲ್ಲಿ ಶಿಖಿಕರ್ಪುರದಂತೆ ಅಡಗದನ್ನಕ್ಕ.