Index   ವಚನ - 11    Search  
 
ಇಂತೀ ವಾಚಾಶ್ರುತಿಗಳಲ್ಲಿ ಸರ್ವವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಪಂಚಾಶತ್ಕೋಟಿ ವಿಸ್ತೀರ್ಣದೊಳಗಾದ ಕವಿ ಗಮಕಿ ವಾದಿ ವಾಗ್ಮಿಗಳು ಮುಂತಾದ ಪೂರ್ವತತ್ವ ನೂತನಪ್ರಸಂಗ ಮುಂತಾದ ಸರ್ವಯುಕ್ತಿ ಸ್ವಯಂಸಂಪನ್ನರು ಷಟ್ಸ್ಥಲಬ್ರಹ್ಮ ಪಂಚವಿಂಶತಿತತ್ವ ಶತ ಏಕಸ್ಥಲ ಮುಂತಾದ ಸರ್ವಸಾರಸಂಪನ್ನರಿಗೆಲ್ಲಕ್ಕೂ ಹಾಕಿದ ಮುಂಡಿಗೆ. ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವಮೂರ್ತಿಗಳೆಲ್ಲವೂ ಅನಾದಿವಸ್ತುವಿನ ಬೀಜರೇಣು. ಅದಕ್ಕೆ ಪ್ರಥಮಾಚಾರ್ಯರು ಬಸವಣ್ಣ ಚೆನ್ನಬಸವಣ್ಣ ಪ್ರಭು ತ್ರೈಮೂರ್ತಿಗಳು. ತ್ರಿಗುಣ ಏಕಾತ್ಮಕವಾಗಿ ಗುರುಲಿಂಗಜಂಗಮ ಮೂರೊಂದಾದಂತೆ ಭಕ್ತಿ, ಜ್ಞಾನ, ವೈರಾಗ್ಯ ತ್ರಿವಿಧ ಬೆಚ್ಚಂತೆ ಸ್ಥೂಲ, ಸೂಕ್ಷ್ಮ, ಕಾರಣ ತ್ರಿವಿಧ ಏಕವಾದಂತೆ ರೂಪು, ರುಚಿ, ಗಂಧ ಸೌಖ್ಯಸಂಬಂಧವಾದಂತೆ ಮರ್ತ್ಯಕ್ಕೆ ಬಂದು, ಭಕ್ತಿವಿರಕ್ತಿಗೆ ಸಲೆ ಸಂದು ನಿಶ್ಚಯವಾದ ಶರಣಸಂಕುಳಕ್ಕೆ ಕರ್ತ ನೀನೊಬ್ಬನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.