ತ್ರಿವಿಧಲಿಂಗಕ್ಕೆ ಸೂತ್ರಭೇದ.
ಸ್ಥಾವರಲಿಂಗ ಬಾಣಲಿಂಗ ಇಷ್ಟಲಿಂಗಕ್ಕೆ,
ಪಂಚಸೂತ್ರದ ತ್ರಿವಿಧಲಿಂಗಕ್ಕೆ ಲಕ್ಷಣಭೇದ.
ಚಕ್ರದಂಡಕ್ಕೆ ಖಂಡಿಕಾದಂಡಕ್ಕೆ ಶಕ್ತಿಪೀಠ ಗೋಮುಖಕ್ಕೆ
ಪಂಚಾಂಗುಲದಲ್ಲಿ ಪ್ರಥಮಾಂಗುಲದ ರೇಖೆ ಮಧ್ಯದಲ್ಲಿ ಹೇಮ
ಪ್ರಥಮ ಅಂಗುಲ ಗತಿ ನಾಲ್ಕರಲ್ಲಿ ಏಕಾದಶ ಪ್ರಕಾರ ಪ್ರಯೋಗದಲ್ಲಿ
ಗುಣಿತದ ಸೂತ್ರ ಲೆಕ್ಕ ಪ್ರಯೋಗಿಸಿರೆ ಚಕ್ರದಂಡಭೇದ.
ಆ ಅರೆಪ್ರಯೋಗ ಸೂತ್ರ ಖಂಡಿಕಾದಂಡ.
ಆ ಉಭಯಭೇದ ಸೂತ್ರಸಂಬಂಧ ಗೋಮುಖ
ಸೂತ್ರಾವಟ್ಟ ಪರಿವರ್ತನ ಪ್ರಯೋಗಸಂಬಂಧ.
ವಿಸ್ತೀರ್ಣಕ್ಕೆ ದಿಗ್ವಳಯಕ್ಕೆ ಸರ[ಳ]ರೇಖೆ
ಶುದ್ಧಪೀಠಿಕಾವಳಯಕ್ಕೆ ಮೇಲೆ ಲಿಂಗಪ್ರಯೋಗ ಚಕ್ರ.
ಖಂಡಿಕಾಶಕ್ತಿಪೀಠಕ್ಕೆ ಲಿಂಗ ಪ್ರಮಾಣ ಲಕ್ಷಣಭೇದ.
ಕುಬ್ಜ ದೀರ್ಘ ಹರಿವರಿಯಿಲ್ಲದೆ ಪ್ರಮಾಣ ಪಂಚಸೂತ್ರವಾಗಿ
ರವಿ ಶಶಿ ಪವನ ಪಾವಕ ಪವಿತ್ರಯೋಗಿ ರೇಖೆ
ಮುಂತಾದ ಲಕ್ಷಣಯುಕ್ತಿಯಲ್ಲಿ ಪ್ರತಿಷ್ಠೆ ಶೈವಲಿಂಗಭೇದ.
ಆ ಪ್ರಮಾಣುವಿನಲ್ಲಿ ಸ್ಥೂಲಕ್ಕೆ ಸ್ಥೂಲ ಸೂಕ್ಷ್ಮಕ್ಕೆ ಸೂಕ್ಷ್ಮ.
ಈ ಸೂತ್ರದಲ್ಲಿ ಬಾಣಲಿಂಗ ಇಷ್ಟಲಿಂಗದ ಲಕ್ಷಣಯುಕ್ತಿ.
ಇಂತೀ ಭೇದ ಉತ್ತಮ ಕನಿಷ್ಠ ಮಧ್ಯಮವೆಂದು
ಸಂಕಲ್ಪಕ್ಕೊಳಗಹ ವೇದಾಂತ ಪ್ರಥಮಪ್ರತಿಷ್ಠೆ ಆಚಾರ್ಯನ ಕರ್ಮಕ್ರೀ.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ
ಆಚಾರ್ಯನಂಗ.