Index   ವಚನ - 10    Search  
 
ರೂಪನರಿದು ರುಚಿಯನುಂಡು ಅವರ ನಿಹಿತಂಗಳ ಕಂಡು ಮತ್ತೆ ಲಿಂಗಕ್ಕೆ ಅರ್ಪಿಸಿ ಪ್ರಸಾದ ಮುಂತಾಗಿ ಕೊಂಡೆಹೆನೆಂಬ ವರ್ತಕಭಂಡರ ನೋಡಾ. ಕಟ್ಟಿ ಹುಟ್ಟದ ರತ್ನ, ಸುಗುಣ ಅಪ್ಪು ತುಂಬದ ಮುತ್ತು ಕಳೆ ತುಂಬದ ಬೆಳಗು, ಹೊಳಹುದೋರದ ಸೂತ್ರ ಲವಲವಿಕೆಯಿಲ್ಲದ ಚಿತ್ತ, ಇದಿರಗುಣವನರಿಯದ ಆತ್ಮ. ಇಂತಿವು ಫಲಿಸಬಲ್ಲವೆ? ಕ್ರೀಯನರಿದು ಅರ್ಪಿಸಬೇಕು. ಅರ್ಪಿಸುವಲ್ಲಿ ದೃಷ್ಟಾಂತದ ಸಿದ್ಧಿ ಪ್ರಸಿದ್ಧವಾಗಬೇಕು. ಕಾಣದವಗೆ ತಾ ಕಂಡು ಕುರುಹಿನ ದಿಕ್ಕ ಅರುಹಿ ತೋರುವನ ತೆರನಂತೆ ತಾ ಲಕ್ಷಿಸಿದಲ್ಲಿ, ತಾ ದೃಷ್ಟಿಸಿದಲ್ಲಿ, ತಾ ಮುಟ್ಟಿದಲ್ಲಿ ಅರ್ಪಿತವಾದ ಪ್ರಸಾದಿಯ ಕಟ್ಟು. ದಹನ ಚಂಡಿಕೇಶ್ವರಲಿಂಗವು ತಾನಾದ ಚಿತ್ತದವನ ಮುಟ್ಟು.