ಅಯ್ಯಾ, ಮತ್ತೊಂದು ವೇಳೆ ಕರ್ಣ ಮಾಡಿದ ಧರ್ಮದ ಕೇಳಿ
ಸಮಸ್ತ ಗುರುಹಿರಿಯರು ಸಮಸ್ತ ಋಷಿಗಳು,
ಅನಂತ ಮುನಿಗಳು, ಅನಂತ ಪಂಡಿತರು, ಅನಂತ ಬ್ರಾಹ್ಮಣರು,
ಅನಂತ ದಾರಿದ್ರ್ಯಸಮೂಹವ ಕೂಡಿಕೊಂಡು
ಅರಣ್ಯದಲ್ಲಿ ಪರ್ಣಶಾಲೆ ಪತ್ರ ಶಾಲೆಗಳ ಮಾಡಿ
ದಾಸೋಹದಿಂದ ತೃಪ್ತಿಬಡಿಸುವುದಯ್ಯ
ಮತ್ತೊಂದು ವೇಳೆ ಪರಮವಿರಕ್ತ ಮನೆಗೆ ಬಂದು ಭಿಕ್ಷಾ ಎಂದಡೆ
ಕಡುದ್ರೇಕದಿಂದ ಭಿಕ್ಷವ ನೀಡದೆ ಹಳಿದು
ದೂಷಣಿಸಿ ದುರ್ವಾಕ್ಯವ ನುಡಿವುದಯ್ಯ.
ಇಂಥ ಕುಲಗೇಡಿ ಚಾಂಡಾಲ ಹೊಲೆ ಮಾದಿಗ
ಜೀವನ ಸಂಗವಹೆರೆಹಿಂಗಿಸಯ್ಯ.
ಮೋಕ್ಷಪ್ರದಾಯಕ ಪೂರ್ವಾಚಾರ್ಯಮೂರ್ತಿ
ಶ್ರೀಗುರುಲಿಂಗಜಂಗಮವೆ,
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.