ಅಯ್ಯಾ, ಒಂದು ಕ್ಷಣಕ್ಕೆ ಪ್ರಸೂತಿ ವೈರಾಗ್ಯ ತಲೆದೋರಿದಲ್ಲಿ
ಸಕಲ ಪದಾರ್ಥವ ಸೂರೆಮಾಡುವುದಯ್ಯ.
ಒಂದು ಕ್ಷಣಕ್ಕೆ ಅಸ್ಥಿರ ಕಾಂಕ್ಷೆಯಿಂದ
ಹಳೆಯ ರಗಟೆಗೆ ಹೊಡದಾಡಿ ಸಾವುದಯ್ಯ.
ಒಂದು ವೇಳೆ ಶ್ಮಶಾನವೈರಾಗ್ಯ ತಲೆದೋರಿದಲ್ಲಿ
ತನ್ನ ಮನೆ ಮಕ್ಕಳು ಸಂಸಾರ ಧನಧಾನ್ಯವ ತ್ಯಜಿಸಿ
ಅರಣ್ಯವಶವಾಗುವುದಯ್ಯ.
ಅಲ್ಲಿ ಹೋಗಿ ಗುಡ್ಡ ಗಹ್ವರದೊಳಗಿರುವ ಪಶುಪಕ್ಷಿಗಳೆಬ್ಬಟ್ಟಿ
ಜಡಸಂಸಾರದಿಂದ ಹಾದಿಮಾರ್ಗದವರ ಬಳಲಿಸಿ
ಬೇಡಿದಲ್ಲಿ ಕೊಟ್ಟಡೆ ಸ್ತುತಿಸಿ
ಕೊಡದಿರ್ದಡೆ ಮಹಾದುಃಖದಿಂದ ನಿಂದ್ಯವ ಮಾಡಿ
ಪರಮಪಾತಕತನದಿಂದ ಚರಿಸುವುದಯ್ಯ.
ಇಂಥ ದುರ್ಜಿವಿಮನದ ಸಂಗವ
ಪರಿಹರಿಸಯ್ಯ ಪ್ರಮಥಗಣನಾಯಕ
ಭಕ್ತವತ್ಸಲ ಭವರೋಗವೈದ್ಯ
ಜಗದಾಧಾರಮೂರ್ತಿ ಸರ್ವಾಂತರ್ಯಾಮಿ
ಶ್ರೀಗುರುಲಿಂಗಜಂಗಮನೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.