ಅಯ್ಯಾ, ಇಂಥ ಮೂಳ ಹೊಲೆ ಜೀವನ ಸಂಗದಿಂದ
ಎನ್ನ ಉನ್ಮನವು ಅದರಂತೆ ಕೂಡಿ,
ದುಶ್ಚರಿತ್ರದಿಂದ ಕುಲಗೇಡಿ ಬುದ್ಧಿಯ ಕಲಿತು
ನನ್ನನು ಹರಿ ಸುರ ಬ್ರಹ್ಮಾದಿಗಳು ಬಿದ್ದ
ಭವದ ಕುಳಿಯಲ್ಲಿ ಕೆಡವಿತಯ್ಯ
ಆ ಬಿದ್ದ ದುಃಖವ ಎಷ್ಟೆಂದು ಹೇಳಲಯ್ಯ, ದೇವ
ಪ್ರಥಮದಲ್ಲಿ ಒಬ್ಬ ಜೀವನ ತಂದೆ-ತಾಯಿಯೆಂದು ಮಾಡಿಕೊಂಡು
ಅವರ ಮಲಮೂತ್ರದ ದ್ವಾರದ ಸಂದಿನಲ್ಲಿ ಕೆಡವಿತ್ತಯ್ಯ.
ಅಲ್ಲಿ ನೋಡಿದಡೆ ಎಳ್ಳಿನಿತು ಹುರುಳಿಲ್ಲ
ಮಹಾ ದುಃಖವೊ ಗುರುವೆ!
ಇಂಥ ಮಹಾದುಃಖ ಜೀವನ ಸಂಗವ ಪರಿಹರಿಸಿ
ನಿಮ್ಮ ಕೃಪಾದೃಷ್ಟಿಯಿಂದ ನೋಡಿ
ಭವಪಾಶದಿಂದ ಕಡೆಗೆ ದಾಂಟಿಸಯ್ಯ
ಶ್ರೀಗುರುಲಿಂಗಜಂಗಮವೆ,
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.