ನೆಲವಾಗಿಲ ಮುಚ್ಚಿ, ತಲೆವಾಗಿಲ ತೆರದು,
ಎವೆ ಮಿಡುಕದಂತೆ ನಿಮ್ಮ ನೋಡುತ್ತಿಪ್ಪ ಸುಖವೆಂದಪ್ಪುದೊ?
ಎನಗೆ ಗುರುವಿನುಪದೇಶವ ಹಿರಿದು ಪರಿಯಲಿ ನಂಬಿ,
ಎರಡು ಪುರ್ಬಿನ ನಡುವೆ ಹರಿವ ಮನವ ನಿಲಿಸಿ,
ಪರಿಣಾಮ ಪರವಶದೊಳೆಂದಿಪ್ಪೆನಯ್ಯಾ?
ಹೋದ ಹೊತ್ತನರಿಯದೆ, ಆದ ದುಃಖವನರಿಯದೆ,
ಬೆರಗು ನಿಂದು ನಿಮ್ಮನೆಂದಿಂಗೊಮ್ಮೆ ನೆರೆವೆ?
ಸದ್ಗುರು ಸಿದ್ಧಸೋಮನಾಥಾ,
ಇಂದು ಕಾಣದ ಮುಕ್ತಿ ಎಂದಿಗೂ ಇಲ್ಲ.