Index   ವಚನ - 22    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮರೆಂಬ ಅಷ್ಟತನುವಿಡಿದು ಜಗಕ್ಕೆ ದೃಷ್ಟನಾಗಿ ತೋರುವ ಕರ್ಮರೂಪವೆಂಬುದು ಶಿವನ ಸ್ಥೂಲತನುವೆನಿಸುವುದು. ಸಕಲಲೋಕಕ್ಕೆ ಆಧಾರಾಧೇಯವಾಗಿ, ಕಮಲಲೋಚನರೊಳಗಾದ ದೇವ ದಾನವ ಮಾನವಮನುಮುನಿಗಳಿಗೊಡೆಯನಾಗಿ, ವರದಾಭಯಕರನೆನಿಸಿ ಮೂರ್ತಿಸಹಿತ ತೋರುವ. ಪ್ರಕೃತಿವಿಡಿದು ನಿತ್ಯವೆನಿಸಿ, ಕೈಲಾಸಪತಿ ಪಶುಪತಿಯಾಗಿ, ನಂದಿನಾಥ ಭೃಂಗಿನಾಥ ಮೊದಲಾದ ಗಣನಾಥರ ಕಣ್ಗೆ ಮಂಗಳವಾಗಿ ತೋರುವ. ಸದಾಶಿವಮೂರ್ತಿಯೆಂಬುದು ಶಿವನ ಸೂಕ್ಷ್ಮತನುವೆನಿಸುವುದು. ಅತ್ಯತಿಷ್ಠದ್ದಶಾಂಗುಲವೆಂಬ ಶ್ರುತಿತಾರ್ಕಣೆಯಾಗಿ, ಅಕಾಯಚರಿತನಾಗಿ, ಕಾಲಕರ್ಮಕ್ಕಗೋಚರನಾಗಿ, ತೋರಿಯೂ ತೋರದೆ, ಮುಟ್ಟಿಯೂ ಮುಟ್ಟದೆ, ಆಗಿಯೂ ಆಗದೆ, ಇರ್ದೂ ಇಲ್ಲದೆ, ಬೆರಸಿಯೂ ಬೆರಸದೆ, ಆಕಾಶದಂತೆ ಭರಿತನಾಗಿ, ಅವಿನಾಶಿಯಾಗಿ, ಅಭಾವಿಯಾಗಿ, ತತ್ವಮಸಿವಾಕ್ಯಲೀನವಾಗಿ, ಜ್ಞಾತೃ ಜ್ಞಾನ ಜ್ಞೇಯವಿಹೀನವಾಗಿ ತೋರಿದನೆನ್ನ ಸ್ವಾಮಿ. ಶ್ರೀಗುರುಕಾರುಣ್ಯದಿಂದಳವಟ್ಟು, ಜ್ಞಾನಿಯ ಹೃದಯದೊಳಗೆ ದರ್ಪಣದ ಛಾಯೆಯಂತೆ ತೋರಿ ಹಿಡಿಯಲಿಲ್ಲದ ಒಳಗಣ ಬಯಲು ಮುಸುಕಿದ ಮಹಾಬಯಲಿನಂತೆ ಮುಟ್ಟಲಿಲ್ಲದ ಸ್ವಯಂವೇದ್ಯವಾದ ಘನತತ್ವದ ರೂಪೆಂಬುದು ಮಹಾಘನ ಸದ್ಗುರು ಸಿದ್ಧಸೋಮನಾಥಾ, ನಿಮ್ಮ ಕಾರಣತನುವೆನಿಸುವುದು.