ಅನಾದಿಬಿಂದುವೆಂಬ ಆಧಾರ ಕುಂಡಲಿಯ ಸ್ಥಾನದಲ್ಲಿ
ಅಂಡವೆಂಟು ಉಂಟು.
ಆ ಎಂಟಂಡವನು ಎಂಟು ಪದ್ಮ ಹೊತ್ತುಕೊಂಡಿಪ್ಪವು.
ಆ ಪದ್ಮದ ಎಸಳು ಏಳುಸಾವಿರದ ಎಪ್ಪತ್ತು ಕೋಟಿಯು.
ಏಳುನೂರ ಮೂವತ್ತಾರು ಎಸಳಿನಲ್ಲಿ
ಅಖಂಡ ಪೂಜೆಯ ಮಾಡಲರಿಯದೆ
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ
ಬ್ರಹ್ಮರಂಧ್ರ ರೇಚಕ ಪೂರಕ ಕುಂಭಕದಲ್ಲಿ
ಚೌಕ ಪದ್ಮಾಸನವ ಮಾಡಿ ಕಂಡೇನೆಂಬ ಯೋಗಿಗಳಿಗೆ
ಇದು ಅಪ್ರಮಾಣ, ಅಗೋಚರ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲರಾಜೇಶ್ವರಲಿಂಗವು
ಇದೆಂದರಿದುದೆ ನಿಜಾನಂದಯೋಗ.