ಮಾತೆಯ ಆತ್ಮದಲ್ಲಿ ರೇತ ರಕ್ತವು ಕೂಡಿ
ಕೆನ್ನೀರ ಮುತ್ತಿನಂತಾಯಿತ್ತಯ್ಯ.
ಆ ಕೆನ್ನೀರ ಮುತ್ತು ವಿದ್ರುಮದಾಕಾರವಾಯಿತ್ತಯ್ಯ,
ಆ ವಿದ್ರುಮದಾಕಾರ ಒಂದು ಹಿಡಿಯಾಯಿತ್ತಯ್ಯ.
ಆ ಹಿಡಿಯಾದುದಕ್ಕೆ ಆಕಾರ ಅಂದವಾಗಿ ಓಂಕಾರ ಸ್ವರೂಪವಾಯಿತ್ತಯ್ಯ.
ಆ ಓಂಕಾರಸ್ವರೂಪವಾದ ಪಿಂಡಕ್ಕೆ ನವಮಾಸ ತುಂಬಿ
ತೆರಪಾದ ಬಾಗಿಲಲ್ಲಿ ಬಂದ ಆತ್ಮನ ಅಂಗವೆ ಅನುವಾಗಿ ಆಯತವಾಯಿತ್ತು.
ಆ ಆಯತವಾದ ಆತ್ಮನು ತನ್ನ ಅಂಗದೊಳ ಹೊರಗೆ ನೋಡುತ್ತಿರಲು
ಅಂಗವೆ ಪಾಣಿವಟ್ಟವಾಯಿತ್ತು, ಲಿಂಗವೆ ಶಿರಸ್ಸು ಆಯಿತ್ತು.
ಆ ಶಿರಸ್ಸಿನೊಳಗೆ ಎರಡು ಜ್ಯೋತಿಯುಂಟು.
ಆ ಎರಡು ಜ್ಯೋತಿಯ ನಡುಮಧ್ಯಸ್ಥಾನದಲ್ಲಿ
ಒಂದು ಅಮೃತದ ಕಮಲವುಂಟು.
ಆ ಕಮಲದೊಳಗಣ ಅಮೃತವನುಣಬಲ್ಲಡೆ
ಆತನೆ ಪಿಂಡಾಂಡಜ್ಞಾನಿಯೆಂದಾತ
ನಮ್ಮ ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವೆಂಬೆ.