ಇನ್ನು ಆ ಆದಿ ಮಕಾರಪ್ರಣವ, ಆದಿ ಅಕಾರಪ್ರಣವ,
ಆದಿ ಉಕಾರಪ್ರಣವ-ಈ ಮೂರೂ
ಪ್ರಣವಂಗಳು ಬೀಜಸಂಯುಕ್ತವಾಗಿ
ಅಖಂಡ ಮಹದೋಂಕಾರವಾಯಿತ್ತು.
ಅದೆಂತೆಂದಡೆ:
ಆ ಆದಿ ಮಕಾರಪ್ರಣವ, ಆದಿ ಅಕಾರಪ್ರಣವ,
ಆದಿ ಉಕಾರಪ್ರಣವ-ಈ ಮೂರೂ ಪ್ರಣವಂಗಳು ಬೀಜಾಕ್ಷರ.
ಆದಿ ಮಕಾರವೇ ಆದಿ ಕಲಾಪ್ರಣವ,
ಆದಿ ಅಕಾರವೆ ಆದಿ ನಾದಪ್ರಣವ.
ಆದಿ ಉಕಾರವೆ ಆದಿ ಬಿಂದುಪ್ರಣವ.
ಆದಿ ಮಕಾರಪ್ರಣವವೇ ಸರ್ವಾತ್ಮನು.
ಆದಿ ಅಕಾರಪ್ರಣವವೇ ಪರಮಾತ್ಮನು.
ಆದಿ ಉಕಾರಪ್ರಣವವೇ ಶಿವಾತ್ಮನು.
ಇದಕ್ಕೆ ಮಹಾದೇವ ಉವಾಚ:
ಅಕಾರಂ ಪರಮಾತ್ಮಾ ಚ ಉಕಾರಃ ಶಿವಾತ್ಮಾ ಭವೇತ್ |
ಮಕಾರಂ ಸರ್ವಾತ್ಮಾ ಚ ಇತಿ ಭೇದಂ ವರಾನನೇ ||''
ಇಂತೆಂದುದಾಗಿ,
ಆದಿ ಮಕಾರಕ್ಕೆ ಆದಿ ಕಲಾಪ್ರಣವವೆ ಆಧಾರ.
ಆದಿ ಅಕಾರಕ್ಕೆ ಆದಿ ನಾದಪ್ರಣವವೆ ಆಧಾರ.
ಆದಿ ಉಕಾರಕ್ಕೆ ಆದಿ ಬಿಂದುಪ್ರಣವವೆ ಆಧಾರ.
ಆದಿ ಪ್ರಾಣಮಾತ್ರೆಯಪ್ರಣವಕ್ಕೆ
ಅಖಂಡ ಜ್ಯೋತಿರ್ಮಯಲಿಂಗವೆ ಆಧಾರ.
ಆದಿ ಮ ಎಂದರೆ ಆದಿ ಕಲಾಪ್ರಣವ.
ಆದಿ ಅ ಎಂದರೆ ಆದಿ ನಾದಪ್ರಣವ.
ಆದಿ ಉ ಎಂಬ ಆದಿ ಬಿಂದುಪ್ರಣವದಲ್ಲಿ
ಬಿಂದು ಸಂಯುಕ್ತವಾಗಿ, ಆದಿ `ಮ' ಎಂಬ ಆದಿ ಮ ನ ಸ ರ
ಪ್ರಣವದಲ್ಲಿ ಬಂದು ಕೂಡಲು ಮಹದೋಂಕಾರವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.