Index   ವಚನ - 340    Search  
 
ಸಚ್ಚಿದಾನಂದಸ್ವರೂಪವಾಗಿಹ ಪರಬ್ರಹ್ಮನೆ ಇಷ್ಟ-ಪ್ರಾಣ-ಭಾವವೆಂದು ಮೂರುತೆರನಾಯಿತ್ತು. ಅದೆಂತೆಂದಡೆ: ಸತ್ತೇ ಭಾವಲಿಂಗ, ಚಿತ್ತೇ ಪ್ರಾಣಲಿಂಗ, ಆನಂದವೇ ಇಷ್ಟಲಿಂಗ ನೋಡಾ. ಇದಕ್ಕೆ ಈಶ್ವರೋsವಾಚ: ಸಚ್ಚಿದಾನಂದರೂಪಂ ಚ ಇಷ್ಟಪ್ರಾಣಂತು ಭಾವಕಂ | ಸತ್ತು ಸದ್ಭಾವಲಿಂಗಂ ಚ ಚಿತ್ತು ಚಿತ್ಪ್ರಾಣಲಿಂಗಕಂ | ಆನಂದಂ ಇಷ್ಟಲಿಂಗಂ ಚ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.