ಇನ್ನು ಜಂಗಮಭಕ್ತಿಯ ವಿವರ ಅದೆಂತೆಂದಡೆ:
ಶುದ್ಧವಹ ಪಾಕಪ್ರಯತ್ನಂಗಳಿಂದ,
ಪ್ರಿಯವಾಕ್ಯಂಗಳಿಂದ, ಬಾಹ್ಯಪರಿಚಾರಂಗಳಿಂದ, ಸಹಜಹಸ್ತದಿಂದ,
ಕುಲ ಛಲ ಧನ ಯವ್ವನ ರೂಪು ವಿದ್ಯೆ ರಾಜ್ಯ
ತಪವೆಂಬ ಅಷ್ಟಮದಂಗಳ ಬಿಟ್ಟು,
ಅಹಂಕಾರವಂ ಬಿಟ್ಟು ನಿರಹಂಕಾರಭರಿತನಾಗಿ,
ಉಪಾಧಿಯ ಬಿಟ್ಟು ನಿರುಪಾಧಿಕನಾಗಿ,
ದೇಹಾದಿಗುಣಂಗಳ ಬಿಟ್ಟು ನಿರ್ದೇಹಿಕನಾಗಿ,
ಅಪೇಕ್ಷೆಯಂ ಬಿಟ್ಟು ನಿರಾಪೇಕ್ಷಿತನಾಗಿ,
ಜಂಗಮವೇ ಲಿಂಗವೆಂದು ಮನಶುಚಿಯಿಂದ ಮಾಡುವುದೀಗ
ಜಂಗಮಭಕ್ತಿ ನೋಡಾ
ಅಪ್ರಮಾಣಕೂಡಲಸಂಗಮದೇವಾ.