Index   ವಚನ - 374    Search  
 
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾಗಿಹ ಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿ ಅನಂತಕೋಟಿಬ್ರಹ್ಮಾಂಡಂಗಳ ಅನಂತಕೋಟಿಮಹಾಭುವನಂಗಳ ಅನಂತಕೋಟಿಲೋಕಾದಿಲೋಕಂಗಳ ಸೃಜಿಸಬೇಕೆಂಬ ನೆನಹುಮಾತ್ರದಲ್ಲಿ ಈ ನಿರಂಜನಾತೀತ ಪ್ರಣವದುತ್ಪತ್ಯವಾಯಿತ್ತು. ಆ ಅವಾಚ್ಯಪ್ರಣವದ ನೆನಹುಮಾತ್ರದಲ್ಲಿಯೇ ನಿರಂಜನ ಕಲಾಪ್ರಣವವು ಉತ್ಪತ್ಯವಾಯಿತ್ತು. ಆ ನಿರಂಜನಾತೀತ ಕಲಾಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿಪ್ರಣವದುತ್ಪತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅನಾದಿ ಅಕಾರ ಉಕಾರ ಮಕಾರದ ನೆನಹುಮಾತ್ರದಲ್ಲಿಯೇ ಅದಿಪ್ರಣವ ಉತ್ಪತ್ಯವಾಯಿತ್ತು. ಆ ಆದಿಪ್ರಣವದ ನೆನಹು ಮಾತ್ರದಲ್ಲಿಯೇ. ಆದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ: ಅಖಂಡಮೂಲ ಚಿಂತಾಯಾಂ ನಿರಂಜನಾತೀತೋದ್ಭವಃ | ನಿರಂಜನಾತೀತ ಚಿಂತಾಯಾಂ ನಿರಂಜನೋಂಕಾರಸಂಭವಃ || ನಿರಂಜನಸ್ಯ ಚಿಂತಾಯಾಂ ಅವಾಚ್ಯಂ ನಾಮ ಜಾಯತೇ | ಅವಾಚ್ಯಸ್ಯ ಚ ಚಿಂತಾಯಾಂ ಕಲಾನಾಮ ಸಮುದ್ಗತಃ || ಕಲಾಪ್ರಣವಚಿಂತಾಯಾಂ ಅನಾದಿಪ್ರಣವೋsಭವತ್ | ಅನಾದಿಪ್ರಣವ ಚಿಂತಾಯಾಂ ಅನಾದಿಮಂತ್ರ ಸಂಭವಃ || ಅನಾದಿಮಂತ್ರಚಿಂತಾಯಾಂ ಆದಿಪ್ರಣವ ಸಂಭವಃ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮುದ್ಗತಂ ||'' ಇಂತೆಂದುದಾಗಿ. ಇದಕ್ಕೆ ಮಹಾವೇದದ ಪ್ರಣವ ಪುರುಷಸೂಕ್ತೇ: ಓಂ ಅಖಂಡಮೂಲಚಿಂತಾಯಾಂ ನಿರಂಜನಾತೀತಮಜಾಯತ | ಕಲಾಪ್ರಣವ ತದಸ್ಯಾ ಅನಾದಿ ಓಂಕಾರೋsಜಾಯತ || ಅನಾದ್ಯೋಂಕಾರಚಿಂತಾಯಾಮನಾದಿ ತ್ರಿಯಕ್ಷರಮಜಾಯತ | ಅನಾದಿ ತ್ರಿಯಕ್ಷರ ಚಿಂತಾಯಾಂ ಆದಿಪ್ರಣವೋsಜಾಯತ | ನಿರಂಜನಾತೀತ ಪ್ರಣವಾಭ್ಯಾಂ ನಿರಂಜನಪ್ರಣವೋsಜಾಯತ | ನಿರಂಜನಪ್ರಣವಾದಸ್ಯ ಅವಾಚ್ಯೋಂಕಾವೋsಜಾಯತ | ಅವಾಚ್ಯೋಂಕಾರಚಿಂತಾಭ್ಯಾಂ ಕಲಾಪ್ರಣವೋsಜಾಯತ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮಜಾಯತ ||'' ಇಂತೆಂದುದು ಶ್ರುತಿ. ಅಪ್ರಮಾಣಕೂಡಲಸಂಗಮದೇವಾ.