Index   ವಚನ - 373    Search  
 
ಅ ಅಖಂಡಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದಡೆ: ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ, ಶಿವಶಕ್ತಿಪ್ರಣವ, ಶಿವಶಕ್ತಿರಹಿತವಾಗಿ ಮಹಾಪ್ರಣವ ಮೊದಲಾಗಿ ಅನಂತಕೋಟಿಪ್ರಣವಂಗಳಿಲ್ಲದಂದು, ಚಿತ್ತಾಕಾಶ ಚಿದಾಕಾಶ ಮಹದಾಕಾಶ ಪರಾಕಾಶ ಶಿವಾಕಾಶ ಬಿಂದ್ವಾಕಾಶ ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ ಅನಂತಕೋಟಿ ಮಹಾಪ್ರಣವಾಕಾಶ, ಅತಿಮಹಾಪ್ರಣವಾಕಾಶ, ಅತಿಮಹಾತೀತಪ್ರಣವಾಕಾಶಂಗಳಿಲ್ಲದಂದು, ಆದಿ ಅನಾದಿ ಅನಾಗತ ಅನಂತ ಅದ್ಭುತ ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ಕಲಿಯುಗಂಗಳೆಂಬ ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಮಹಾಯುಗಂಗಳು, ಅತಿಮಹಾಯುಗಂಗಳು ಅತಿಮಹಾತೀತ ಮಹಾಯುಗಂಗಳಿಲ್ಲದಂದು, ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿ ಇದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣ ಕೂಡಲಸಂಗಮದೇವ.