Index   ವಚನ - 377    Search  
 
ನಿರಾಳ ನಿರಂಜನವಿಲ್ಲದಂದು, ನಾದ ಬಿಂದು ಕಳೆಗಳಿಲ್ಲದಂದು, ಅತ್ಯತಿಷ್ಟದ್ಧಶಾಂಗುಲವೆಂಬ ವಿರಾಟ್ಪುರುಷನುತ್ಪತ್ಯವಾಗದಂದು, ಮಹಾಜ್ಯೋತಿರ್ಮಯಲಿಂಗವೆಂಬ ನಾಮ ತಲೆದೋರದಂದು, ಕುಳ ನಿರಾಕುಳ ಅಪ್ರಮಾಣ ಅಗೋಚರ ವಾಚಾತೀತ ಮನೋತೀತವೆಂಬ ಶಬ್ದಸಂದಣಿ ನಾಮಸೀಮೆಗಳೇನೂ ಎನಲಿಲ್ಲದಂದು, ಬ್ರಹ್ಮ ಪರಬ್ರಹ್ಮವೆಂಬ ಭಿನ್ನನಾಮ ತಲೆದೋರದಂದು, ಅಖಂಡ ಗೋಳಕಾಕಾರಲಿಂಗ ಉತ್ಪತ್ಯವಾಗದಂದು, ಆ ಲಿಂಗದ ಪಂಚಸಂಜ್ಞೆ ತಲೆದೋರದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ತದೇವರ್ಕಳಿಗೂ ಜನನಸ್ಥಲವಾದ ನಿರ್ವಾಣಪದವಿಲ್ಲದಂದು, ಶಿವಸಂಬಂಧ ಶಕ್ತಿ ಸಂಬಂಧವಾಗಿಹ ಓಂಕಾರ ಉತ್ಪತ್ಯವಾಗದಂದು, ಶಿವಶಕ್ತಿರಹಿತವಾಗಿಹ ಮಹದೋಂಕಾರ ಉತ್ಪತ್ಯವಾಗದಂದು, ಅತಿಸೂಕ್ಷ್ಮ ಪಂಚಾಕ್ಷರ, ಪ್ರಣವಪಂಚಾಕ್ಷರ ಉತ್ಪತ್ಯವಾಗದಂದು, ನಿರಂಜನಾತೀತಪ್ರಣವವಾಗಿದ್ದನಯ್ಯಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.