ಏನು ಏನೂ ಎನಲಿಲ್ಲದ ಮಹಾಘನ ಚಿತ್ಕಲಾಪ್ರಣವದ
ನೆನಹುಮಾತ್ರದಲ್ಲಿ ಅನಾದಿಪ್ರಣವದ ಉತ್ಪತ್ಯವಾಯಿತ್ತು.
ಆ ಅನಾದಿಪ್ರಣವಸ್ಥಲದ ವಚನವೆಂತೆಂದಡೆ:
ಆದಿ ಅಕಾರ ಆದಿ ಉಕಾರ ಆದಿ ಮಕಾರವೆಂಬ
ಆದಿ ಅಕ್ಷರತ್ರಯಂಗಳಿಲ್ಲದಂದು.
ಆದಿ ನಾದ ಆದಿ ಬಿಂದು ಆದಿ ಕಲೆಗಳೆಂಬ
ಭಿನ್ನನಾಮ ತಲೆದೋರದಂದು,
ಆದಿ ಪ್ರಕೃತಿ ಆದಿ ಪ್ರಾಣವಿಲ್ಲದಂದು,
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವ
ಜ್ಯೋತಿರ್ಲಿಂಗವಿಲ್ಲದಂದು,
ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಸಂಗಮದೇವನು