ಆದಿ ರುದ್ರ ಆದಿ ಈಶ್ವರ ಆದಿ ಸದಾಶಿವರಿಲ್ಲದ ಮುನ್ನ ಮುನ್ನ,
ಆದಿ ಅಕಾರ ಆದಿ ಉಕಾರ ಆದಿ ಮಕಾರಕ್ಕೆ
ಆದಿ ನಾದ ಆದಿ ಬಿಂದು ಆದಿ ಕಲೆಗಳು
ಆಧಾರವಾಗದ ಮುನ್ನ ಮುನ್ನ,
ಆ ಆದಿ ನಾದ-ಬಿಂದು-ಕಲೆಗಳಿಗೆ
ಆ ಆದಿ ಪ್ರಕೃತಿಗಳಾಧಾರವಾಗದ ಮುನ್ನ ಮುನ್ನ,
ಆ ಆದಿ ಪ್ರಾಣಕ್ಕೆ ಲಿಂಗಾಧಾರವಾಗದ ಮುನ್ನ ಮುನ್ನವೆ
ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.