ಏನೂ ಏನೂ ಎನಲಿಲ್ಲದ ಅನಾದಿ ಪ್ರಣವದ
ನೆನಹು ಮಾತ್ರದಲ್ಲಿಯೇ ಅನಾದಿ ಅಕಾರ,
ಅನಾದಿ ಉಕಾರ, ಅನಾದಿ ಮಕಾರವೆಂಬ
ಪ್ರಣವತ್ರಯಂಗಳುತ್ಪತ್ಯವಾಯಿತ್ತು.
ಆ ಅನಾದಿ ಅಕಾರ, ಆ ಅನಾದಿ ಉಕಾರ, ಆ ಅನಾದಿ ಮಕಾರವೆಂಬ
ಪ್ರಣವತ್ರಯಂಗಳ ನಿರ್ದೇಶನಸ್ಥಲದ ವಚನವದೆಂತೆಂದಡೆ:
ಅಕಾರ ಉಕಾರ ಮಕಾರವೆಂಬ ನಿರಾಕಾರಪ್ರಣವತ್ರಯದ ಮೇಲೆ
ನಿರ್ವಯಲು ಬಂದು ಕುಳ್ಳಿರದಂದು,
ಬಯಲು ನಿರ್ವಯಲೆಂಬಾ ನಾಮ ತಲೆದೋರದಂದು,
ಪ್ರರಬ್ರಹ್ಮಲೀಲೆಯು ನಿಂದು ಏನೂ ಏನೂ ಎನಲಿಲ್ಲದಂದು,
ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ
ಪ್ರಣವತ್ರಯವಾಗಿದ್ದನು ನೋಡಾ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವ.