ಆದಿ ಅಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ
ಉತ್ಪತ್ಯವಾಗದ ಮುನ್ನ ಮುನ್ನ,
ಆದಿ ಉಕಾರದಲ್ಲಿ ಕುಂಡಲಾಕಾರ ಅರ್ಧಚಂದ್ರಕಸ್ವರೂಪ
ಉತ್ಪತ್ಯವಾಗದ ಮುನ್ನ ಮುನ್ನ,
ಆದಿ ಮಕಾರದಲ್ಲಿ ದರ್ಪಣಾಕಾರ ಜ್ಯೋತಿಸ್ವರೂಪ
ಉತ್ಪತ್ಯವಾಗದ ಮುನ್ನ ಮುನ್ನ,
ಆದಿ ಅಕಾರ ಉಕಾರ ಮಕಾರ-ಈ ಮೂರು ಏಕವಾಗಿ
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವ
ಉತ್ಪತ್ಯವಾಗದ ಮುನ್ನ ಮುನ್ನವೆ
ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವನು.