ಏನೂ ಏನೂ ಎನಲಿಲ್ಲದ ಅನಾದಿ ಅಕಾರ, ಅನಾದಿ ಉಕಾರ,
ಅನಾದಿ ಮಕಾರವೆಂಬ ಪ್ರಣವತ್ರಯಂಗಳ ನೆನಹು ಮಾತ್ರದಲ್ಲಿಯೇ
ಆದಿ ಪ್ರಣವ ಉತ್ಪತ್ಯವಾಯಿತು.
ಆ ಆದಿ ಪ್ರಣವಸ್ಥಲದ ವಚನವದೆಂತೆಂದಡೆ:
ಆಧಾರಚಕ್ರ ಸ್ವಾಧಿಷ್ಠಾನಚಕ್ರ ಉತ್ಪತ್ಯವಾಗದ ಮುನ್ನ,
ಮಣಿಪೂರಕಚಕ್ರ ಅನಾಹತಚಕ್ರ ಉತ್ಪತ್ಯವಾಗದ ಮುನ್ನ,
ವಿಶುದ್ಧಿಚಕ್ರ ಆಜ್ಞಾಚಕ್ರ ಉತ್ಪತ್ಯವಾಗದ ಮುನ್ನ,
ಬ್ರಹ್ಮಚಕ್ರ ಶಿಖಾಚಕ್ರ ಉತ್ಪತ್ಯವಾಗದ ಮುನ್ನ,
ಪಶ್ಚಿಮಚಕ್ರ ಅಣುಚಕ್ರ ಉತ್ಪತ್ಯವಾಗದ ಮುನ್ನವೆ
ಓಂಕಾರವೆಂಬ ಆದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.