Index   ವಚನ - 462    Search  
 
ಇನ್ನು ಷಡ್ವಿಧಲಿಂಗದ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ನಾದಸ್ವರೂಪವಾಗಿ ಆಚಾರಲಿಂಗವಿಹುದು. ಸ್ವಾಧಿಷ್ಠಾನಚಕ್ರದಲ್ಲಿ ಮಹಾನಾದಸ್ವರೂಪವಾಗಿ ಗುರುಲಿಂಗವಿಹುದು. ಮಣಿಪೂರಕಚಕ್ರದಲ್ಲಿ ಅತಿಮಹಾನಾದಸ್ವರೂಪವಾಗಿ ಶಿವಲಿಂಗವಿಹುದು. ಅನಾಹತಚಕ್ರದಲ್ಲಿ ಬ್ರಹ್ಮನಾದಸ್ವರೂಪವಾಗಿ ಜಂಗಮಲಿಂಗವಿಹುದು. ವಿರುದ್ಧಿಚಕ್ರದಲ್ಲಿ ದಿವ್ಯನಾದಸ್ವರೂಪವಾಗಿ ಪ್ರಸಾದಲಿಂಗವಿಹುದು. ಆಜ್ಞಾಚಕ್ರದಲ್ಲಿ ಪ್ರಾಣನಾದಸ್ವರೂಪವಾಗಿ ಮಹಾಲಿಂಗವಿಹುದು ನೋಡಾ, ಇದಕ್ಕೆ ಶಿವಲಿಂಗಾಗಮಸೂತ್ರೇ: ಆಧಾರೇ ಭೃತ್ಯಲಿಂಗಂ ಚ ಸ್ವಾಧಿಷ್ಠೇ ಗುರುಲಿಂಗಕಂ | ಶಿವಂ ಚ ಮಣಿಪೂರೇ ಚ ಜಂಗಮಂ ಚ ಅನಾಹತೇ || ಪ್ರಸಾದಂ ಚ ವಿಶುದ್ಧಿಶ್ಚ ಆಜ್ಞಾಯಾಂ ಮಹಾಲಿಂಗಕಂ | ಇತಿ ಲಿಂಗಸ್ಥಲಂ ಜ್ಞಾತ್ವಾ ಸುಸೂಕ್ಷ್ಮಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.