ಅಲ್ಲಿಂದ ಮೇಲೆ ಹೃದಯಸ್ಥಾನದಲ್ಲಿ
ಅನಾಹತಚಕ್ರ, ವಾಯುವೆಂಬ ಮಹಾಭೂತ.
ಆ ಚಕ್ರ ಷಟ್ಕೋಣಾಕಾರ, ದ್ವಾದಶದಳಪದ್ಮ,
ಆ ಪದ್ಮ ಕುಂಕುಮವರ್ಣ,
ಅಲ್ಲಿಯ ಅಕ್ಷರ ಕಖಗಘಙ ಚಛಜಝಞ ಟಠ
ಎಂಬ ದ್ವಾದಶಾಕ್ಷರ ನ್ಯಾಸವಾಗಿಹುದು.
ಅಲ್ಲಿ ತತ್ಪುರುಷಮುಖವನುಳ್ಳ ಜಂಗಮಲಿಂಗ,
ಆ ಲಿಂಗಕ್ಕೆ ಶಾಂತಿಕಲೆ,
ಅಲ್ಲಿ ಅಮೂರ್ತಿಸಾದಾಖ್ಯ, ಅಲ್ಲಿಯ ದಿಕ್ಕು ಪೂರ್ವದಿಕ್ಕು,
ಅಲ್ಲಿಯ ನಾದ ಭೇರೀನಾದ,
ಶಾಕಿನಿಯೆಂಬ ಪರಿಯಾಯ ನಾಮವನುಳ್ಳ ಆದಿಶಕ್ತಿ
ಲಿಂಗದತ್ವಕ್ಕೆಂಬ ಮುಖಕ್ಕೆ ಸುಮನವೆಂಬ ಹಸ್ತದಿಂದ
ಅನುಭಾವಭಕ್ತಿಯಿಂದ ಸ್ಪರ್ಶನದ್ರವ್ಯವನು
ಅಥರ್ವಣವೇದವನುಚ್ಚರಿಸುತ್ತ ಅರ್ಪಿಸುವಳು.
ಈಶ್ವರ ಪೂಜಾರಿ, ಗೂಢವೆಂಬ ಸಂಜ್ಞೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ವಕಾರವೆಂಬ ಬೀಜಾಕ್ಷರ;
ಅದು ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿಹುದಾಗಿ,
ಆ ಈ ಊ ಏ ಓ ವಾಂ ಎಂಬ ಬ್ರಹ್ಮನಾದ ಮಂತ್ರಮೂರ್ತಿಪ್ರಣವದ
ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ
ನಮಸ್ಕಾರವು ನೋಡಾ.
ಇದಕ್ಕೆ ಶ್ರೀಮಹಾದೇವೋsವಾಚ:
ಅನಾಹತಂ ಹೃದಿ ಸ್ಥಾನಂ ವಾಯುಭೂತಂ ಷಡಾಕೃತಿ |
ಪದ್ಮಂತು ದ್ವಾದಶಂ ಚೈವ ಅಕ್ಷರಂ ದ್ವಾದಶಂ ಸ್ಮೃತಂ |
ಕುಂಕುಮವರ್ಣಮೀಶಂಚ ಅಧಿದೈವಂ ಶಕ್ತಿಮೇವಚ |
ಶಾಕಿನಿ ರಕ್ಷರರ್ಬಿಚ್ಚೈ ವಕಾರಸ್ಯಂತುರುಚ್ಯತೇ |
ಭೇರಿನಾದಂ ಚತೋರ್ಲಿಂಗಂ ಸ್ಥಿತೋ ದೇವಿ ನ ಸಂಶಯಃ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.