Index   ವಚನ - 497    Search  
 
ಅಲ್ಲಿಂದ ಮೇಲೆ ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ಆ ಚಕ್ರ ತಮಂಧಾಕಾರ, ದ್ವಿದಳ ಪದ್ಮ, ಆ ಪದ್ಮ ಮಾಣಿಕ್ಯವರ್ಣ. ಅಲ್ಲಿಹ ಅಕ್ಷರ ಹಂ ಳಂ ಹಂ ಕ್ಷಂ ಎಂಬ ಚತುರಾಕ್ಷರ ನ್ಯಾಸವಾಗಿಹುದು. ನಿರ್ಭಾವಮುಖವನುಳ್ಳ ಮಹಾಲಿಂಗ. ಆ ಲಿಂಗಕ್ಕೆ ಶಾಂತ್ಯತೀತೋತ್ತರ ಕಲೆ, ಅಲ್ಲಿ ನಿರ್ಮುಕ್ತಿಯೆಂಬ ಮಹಾಸಾದಾಖ್ಯ, ಅಲ್ಲಿಯ ನಾದ ಪ್ರಣವನಾದ, ಹಾಕಿನಿಯೆಂಬ ಪರಿಯಾಯ ನಾಮವನುಳ್ಳ ಚಿಚ್ಛಕ್ತಿ ಲಿಂಗದ ಹೃದಯವೆಂಬ ಮುಖದಲ್ಲಿ, ಸದ್ಭಾವವೆಂಬ ಹಸ್ತದಿಂದ ಸಮರಸಭಕ್ತಿಯಿಂದ ಪರಿಣಾಮವೆಂಬ ದ್ರವ್ಯವನು ಅಜಪೆಯನುಚ್ಚರಿಸುತ್ತ ಅರ್ಪಿಸುವಳು. ಪರಶಿವ ಪೂಜಾರಿ, ನಿರಾಕುಳವೆಂಬ ಸಂಜ್ಞೆ. ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಓಂಕಾರವೆಂಬ ಬೀಜಾಕ್ಷರ. ಅದು ಅನಂತಕೋಟಿ ಬೀಜಾಕ್ಷರವನೊಳಕೊಂಡು ಅಕಾರ ಉಕಾರ ಮಕಾರವೆಂಬ ನಾದ ಬಿಂದು ಕಳೆಗೆ ಆಶ್ರಯವಾಗಿಹುದು. ತತ್ ಪದ ತ್ವಂಪದ ಅಸಿಪದವೆಂಬ ಪದತ್ರಯಂಗಳನೊಳಕೊಂಡು ಅನೇಕ ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದಾಗಿ ಅಲ್ಲಿ ಆ ಈ ಊ ಏ ಓಂ ಎಂಬ ಬ್ರಹ್ಮನಾದಮಂತ್ರಮೂರ್ತಿಪ್ರಣವದ ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ ನಮಸ್ಕಾರವು ನೋಡಾ. ಇದಕ್ಕೆ ಈಶ್ವರೋsವಾಚ: ಭ್ರೂಮಧ್ಯೇ ಆಗ್ನೇಯಚಕ್ರಂ ಮಹಾಭೂತಸ್ಯ ಮಾನಸಂ | ತಮಂಧಾಕಾರಯೋಶ್ಚೈವ ದ್ವಿದಳಂ ಕಮಲಾಕ್ಷರಂ || ದ್ವಯೋರಾತ್ಮಮಧಿದೈವತಂ ಹಾಕಿನೀಶಕ್ತಿರೇವ ಚ | ಉನ್ಮನೀಜ್ಯೋತಿ ತೇಜಂ ಚ ಪ್ರಣವಂ ಬೀಜಮೇವ ಚ || ಘೋಷಂ ಪ್ರಣವನಾದಂ ಚ ಮಹಾಲಿಂಗಸ್ಥಲೇ ತಥಾ | ಷಡ್ಲಿಂಗಂ ಷಣ್ಮುಖಂ ಚೈವ ಷಷ್ಠ ಸಾದಾಖ್ಯಮೇವ ಚ || ತಥಾ ಷಟ್‌ಶಕ್ತಿ ಷಡ್ಭೇದಂ ಷಡ್ಭಕ್ತಿಶ್ಚ ಷಡ್ದ್ರವ್ಯಕಂ | ಷಡ್‌ಲಿಂಗಾರ್ಪಣಂ ಚೈವ ವಕ್ತ್ರೇ ತಿಷ್ಟಂತಿ ಪಾರ್ವತಿ | ಇತಿ ಚಕ್ರಾರ್ಪಣಂ ಜ್ಞಾತುಂ ದುರ್ಲಭಂ ಕಮಲಾನನೇ || ಷಟ್ಚಕ್ರಾಗ್ರಸ್ಥಿತಂ ಚಕ್ರಂ ತ್ರಿವಿಧಂ ಪರಿಕೀರ್ತಿತಾಃ | ಬ್ರಹ್ಮಚಕ್ರ ಶಿಖಾಚಕ್ರಂ ಪಶ್ಚಿಮಂ ಶಿಖಾಚಕ್ರಮೇವ ಚ || ಅಜಚಕ್ರೇರುತ್ತಮಾಂಗಂ ಸಹಸ್ರದಳಪದ್ಮಕಂ | ಅಕ್ಷರಸ್ಯ ಸಹಸ್ರಂತು ಜ್ಯೋತಿರ್ವರ್ಣಮೇವ ಚ || ಅಕ್ಷರಾತ್ಮಮಯಂ ಪ್ರೋಕ್ತಂ ದಿವ್ಯವೇದಸ್ಯ ಘೋಷಣಂ | ನಿರ್ಮಾಯಶಕ್ತಿರಾಖ್ಯಾತಂ ಅಂತರಾತ್ಮೆ ಗುರೋಸ್ಥಿತಂ || ಬ್ರಹ್ಮಸ್ಥಾನೇ ಶಿಖಾಚಕ್ರಂ ತ್ರಿದಳೇ ಕಮಲಸ್ಯತು | ತ್ರಿಯಕ್ಷರಮವಾಪ್ನೋತಿ ಮಹಾಜ್ಯೋತಿಶ್ಚ ವರ್ಣಕಂ || ಅಕ್ಷರಾತ್ಮಾ ಸಂಬಂಧಃ ಸಿಂಹನಾದಸ್ಯ ಘೋಷಣಂ | ನಿಭ್ರಾಂತಶಕ್ತಿರಾಖ್ಯಾತಂ ಲಿಂಗಂಚ ಪರಮಾತ್ಮಕಂ || ಸದಾ ಸನ್ನಿಹಿತಂ ದೇವಿ ಶಿಖಾಚಕ್ರಮಿತಿ ಸ್ಮೃತಂ | ಬ್ರಹ್ಮಪೀಠಸ್ಯ ಯೋ ರೂಢಂ ಪಶ್ಚಿಮಚಕ್ರ ಸಂಸ್ಥಿತಾ || ಪದ್ಮಮೇಕದಳಂಚೈವ ಅಕ್ಷರಾರೇಕಯೋರಸಿ | ನಾಸನಂ ರೂಪವರ್ಣಂತು ಅಕ್ಷರಾತೀತಮೇವ ಚ || ನಿಶ್ಶಬ್ದಂ ಶಿವ ಮಯಂ ಪ್ರೋಕ್ತಂ ಶಕ್ತಿಶ್ಚ ನಿರುಪಾಧಿಕಂ | ಸರ್ವಾರ್ಥಮೂರ್ತಿನಾಮಂ ಚ ತಸ್ಯ ಜಂಗಮಸಂಯುತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.