Index   ವಚನ - 505    Search  
 
ಪೃಥ್ವಿಯೆಂಬ ಮಹಾಭೂತವೇ ಅಂಗವಾಗಿ ಭಕ್ತನಿಹನು. ಅಪ್ಪುವೆಂಬ ಮಹಾಭೂತವೇ ಅಂಗವಾಗಿ ಮಾಹೇಶ್ವರನಿಹನು. ತೇಜವೆಂಬ ಮಹಾಭೂತವೇ ಅಂಗವಾಗಿ ಪ್ರಸಾದಿಯಿಹನು. ವಾಯುವೆಂಬ ಮಹಾಭೂತವೇ ಅಂಗವಾಗಿ ಪ್ರಾಣಲಿಂಗಿಯಿಹನು. ಆಕಾಶವೆಂಬ ಮಹಾಭೂತವೇ ಅಂಗವಾಗಿ ಶರಣನಿಹನು. ಆತ್ಮನೆಂಬ ಮಹಾಭೂತವೇ ಅಂಗವಾಗಿ ಐಕ್ಯನಿಹನು ನೋಡಾ. ಇದಕ್ಕೆ ಚಿತ್ಪ್ರಕಾಶಾಗಮೇ: ಪೃಥ್ವೀಭೂತೇ ಚ ಭಕ್ತಶ್ಚ ಅಪ್‍ಭೂತೋ ಮಾಹೇಶ್ವರಃ | ಪ್ರಸಾದೀ ತೇಜಭೂತಂ ಚ ಪ್ರಾಣಂ ಚ ವಾಯುಭೂತಕಂ || ಶರಣ್ಯಾಕಾಶಭೂತಂ ಚ ಐಕ್ಯಶ್ಚಾತ್ಮಭೂತಕಂ | ಇತಿ ಷಟ್‍ಸ್ಥಲಂ ದೇವಿ ಸ್ಥಾನ ಸ್ಥಾನೇ ಸಮಾಚರೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.