Index   ವಚನ - 504    Search  
 
ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ ಐಕ್ಯನುತ್ಪತ್ಯವಾದನು. ಆ ಪ್ರಣವದ ದರ್ಪಣಾಕಾರದಲ್ಲಿ ಶರಣನುತ್ಪತ್ಯವಾದನು. ಆ ಪ್ರಣವದ ಅರ್ಧಚಂದ್ರಕದಲ್ಲಿ ಪ್ರಾಣಲಿಂಗಿ ಉತ್ಪತ್ಯವಾದನು. ಆ ಪ್ರಣವದ ಕುಂಡಲಾಕಾರದಲ್ಲಿ ಪ್ರಸಾದಿ ಉತ್ಪತ್ಯವಾದನು. ಆ ಪ್ರಣವದ ದಂಡಕಸ್ವರೂಪದಲ್ಲಿ ಮಹೇಶ್ವರ ಉತ್ಪತ್ಯವಾದನು. ಆ ಪ್ರಣವದ ತಾರಕಸ್ವರೂಪದಲ್ಲಿ ಭಕ್ತನುತ್ಪತ್ಯವಾದನು ನೋಡಾ. ಇದಕ್ಕೆ ಚಿತ್ಪ್ರಕಾಶಾಗಮೋತ್ತರಸಾರೇ: ಓಂಕಾರ ಜ್ಯೋತಿರೂಪೇ ಚ ಐಕ್ಯಂತು ಸಮುದ್ಭವಂ | ಓಂಕಾರ ದರ್ಪಣಾಕಾರೇ ಶರಣಶ್ಚ ಸಮುದ್ಭವಂ || ಓಂಕಾರೇಚಾರ್ಧಚಂದ್ರೇ ಚ ಪ್ರಾಣಲಿಂಗೀ ಸಮುದ್ಭವಂ | ಓಂಕಾರ ದಂಡಕರೂಪೇ ಚ ಮಾಹೇಶ್ವರ ಸಮುದ್ಭವಃ | ಓಂಕಾರ ತಾರಕಾರೂಪೇ ಭಕ್ತಶ್ಚೈವ ಸಮುದ್ಭವಃ | ಇತಿ ಷಟ್‌ಸ್ಥಲಂ ದೇವಿ ಸ್ಥಾನಸ್ಥಾನೇಷು ಜಾಯತೇ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.