ಪಿಂಗಳನಾಳದಲ್ಲಿ ಆಡುವ ಸೂರ್ಯನ ದೇವರೆಂಬರು;
ಆ ಸೂರ್ಯ ದೇವರಲ್ಲ ನೋಡಾ.
ಇಡಾನಾಳದಲ್ಲಿ ಆಡುವ ಚಂದ್ರನ ದೇವರೆಂಬರು;
ಆ ಚಂದ್ರನು ದೇವರಲ್ಲ ನೋಡಾ.
ಸುಷುಮ್ನನಾಳದಲ್ಲಿ ಆಡುವ ಜೀವಾತ್ಮನ ದೇವರೆಂಬರು;
ಆ ಜೀವಾತ್ಮನು ದೇವರಲ್ಲ ನೋಡಾ.
ಆ ಇಡಾ ಪಿಂಗಳ ಸುಷುಮ್ನ ನಾಳದೊಳಾಡುವ
ಚಂದ್ರ ಸೂರ್ಯ ಜೀವಾತ್ಮರಿಗೆ ಪರಬ್ರಹ್ಮವೇ ಜನಕನೆಂದರಿದು
ಆ ಪರಬ್ರಹ್ಮವೇ ತಾನೆಂದರಿದಡೆ ತಾನೆ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವ.