ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚಭೌತಿಕದ ಪಂಚವಿಂಶತಿಗುಣಂಗಳಿಂದಾದ
ದೇಹವ ದೇವರೆಂಬರು;
ಆ ದೇಹವು ದೇವರಲ್ಲ ನೋಡಾ.
ಸಕಲೇಂದ್ರಿಯಕ್ಕೂ ಒಡೆಯನಾಗಿಹ ಮನವ ದೇವರೆಂಬರು;
ಆ ಮನ ದೇವರಲ್ಲ ನೋಡಾ.
ಆ ಮನದಿಂದಾದ ಬುದ್ಧಿಯ ದೇವರೆಂಬರು;
ಆ ಬುದ್ಧಿ ದೇವರಲ್ಲ ನೋಡಾ.
ಆ ಬುದ್ಧಿಯಿಂದಾದ ಚಿತ್ತವ ದೇವರೆಂಬರು;
ಆ ಚಿತ್ತ ದೇವರಲ್ಲ ನೋಡಾ.
ಆ ಚಿತ್ತದಿಂದಾದ ಅಹಂಕಾರವ ದೇವರೆಂಬರು;
ಆ ಅಹಂಕಾರ ದೇವರಲ್ಲ ನೋಡಾ.
ಆ ಅಹಂಕಾರದಿಂದ ಜೀವನಾಗಿ ಅಳಿವ ಜೀವವ ದೇವರೆಂಬರು;
ಆ ಅಳಿವ ಜೀವ ದೇವರಲ್ಲ ನೋಡಾ.
ಇವೆಲ್ಲ ಅಳಿವವಲ್ಲದೆ ಉಳಿವವಲ್ಲ; ದೇವರಿಗೆ ಅಳುವುಂಟೆ?
ಅಳಿವಿಲ್ಲದ ಪರಶಿವತತ್ವವ ತಾನೆಂದರಿದಡೆ,
ತಾನೇ ದೇವ ನೋಡಾ
ಅಪ್ರಮಾಣಕೂಡಲಸಂಗಮದೇವ.