ಪರತತ್ತ್ವದ ಅಪ್ಪುವಿನ ಮೇಲೆ ನಿರಂಜನ ಸ್ವಾಧಿಷ್ಠಾನಚಕ್ರ.
ಅಲ್ಲಿಯ ಪದ್ಮ ನಾನೂರಐವತ್ತು ದಳದಪದ್ಮ.
ಆ ಪದ್ಮದ ವರ್ಣ ಎಪ್ಪತ್ತುಸಾವಿರದಾರುನೂರುಕೋಟಿ
ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ನಾನೂರಐವತ್ತಕ್ಷರ,
ಆ ಅಕ್ಷರ ಮನಾತೀತವಾಗಿಹುದು.
ಅಲ್ಲಿಯ ಶಕ್ತಿ ಆನಂದಶಕ್ತಿ , ಅಚಲಾನಂದ ಬ್ರಹ್ಮವೇ ಅಧಿದೇವತೆ.
ಅಲ್ಲಿಯ ನಾದ ಪರನಾದ.
ಅಲ್ಲಿಯ ಬೀಜಾಕ್ಷರ ಪರಬ್ರಹ್ಮಸ್ವರೂಪವಾಗಿಹ ಪರಮೋಂಕಾರ ನೋಡಾ,
ಅಪ್ರಮಾಣಕೂಡಲಸಂಗಮದೇವಾ.