Index   ವಚನ - 649    Search  
 
ಪರತತ್ತ್ವದ ವಾಯುವಿನ ಮೇಲೆ ನಿರಂಜನ ಅನಾಹತಚಕ್ರ. ಅಲ್ಲಿಯ ಪದ್ಮ ಇನ್ನೂರ ಎಪ್ಪತ್ತುದಳದಪದ್ಮ. ಆ ಪದ್ಮದ ವರ್ಣ ತೊಂಬತ್ತುಸಾವಿರದಾರುನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ಇನ್ನೂರ ಎಪ್ಪತ್ತಕ್ಷರ: ಆ ಅಕ್ಷರ ತತ್ತ್ವಾವತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಮಯಾನಂದವೆಂಬ ಮಹಾಶಕ್ತಿ. ವಿಮಲಾನಂದಬ್ರಹ್ಮವೆ ಅಧಿದೇವತೆ. ಅಲ್ಲಿಯ ನಾದ ನಿರಾಳನಾದ. ಅಲ್ಲಿಯ ಬೀಜಾಕ್ಷರ ಕಲಾಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.