ಪರತತ್ತ್ವದ ಹೃದಯದ ಮೇಲೆ ನಿರಂಜನ ಆಜ್ಞಾಚಕ್ರ.
ಅಲ್ಲಿಯ ಪದ್ಮ ವಿಶ್ವತೋದಳಪದ್ಮ.
ಆ ಪದ್ಮದ ವರ್ಣ ಅನಂತಕೋಟಿ
ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರಂಗಳು ವಿಶ್ವತೋ ಅಕ್ಷರಂಗಳು.
ಆ ಅಕ್ಷರಂಗಳು ವಿಶ್ವಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಮಯಾನಂದಾತೀತವೆಂಬ ಮಹಾಶಕ್ತಿ.
ನಿರಂಜನಾತೀತವೆಂಬ ಮಹಾಘನಲಿಂಗವೆ ಅಧಿದೇವತೆ.
ಅಲ್ಲಿಯ ನಾದ ಮಹಾಗುಹ್ಯನಾದ.
ಅಲ್ಲಿಯ ಬೀಜಾಕ್ಷರ ನಿರಂಜನಪ್ರಣವ ನೋಡಾ
ಅಪ್ರಮಾಣಕೂಡಲಸಂಗಮದೇವಾ.