Index   ವಚನ - 681    Search  
 
ಇನ್ನು ನಿರ್ಮಲಾವಸ್ಥೆಯ ದರ್ಶನವ ಮಾಡುವಾಗ ಪಂಚಲಿಂಗಗಳನು ದರ್ಶನವ ಮಾಡುವುದು. ಅದೆಂತೆಂದಡೆ: ಅಣವ, ಮಾಯೆ, ಕಾರ್ಮಿಕ, ಮಹಾಮಾಯೆ, ತಿರೋಧಾನಮಲ. ಆಣವಮಲವಾವುದು? ಶಿವನ ನೆನೆಯಲೀಸದಿಹುದು. ಮಾಯೆಯಾವುದು? ತನು ಕರಣ ಭುವನಭೋಗಂಗಳ ಬಯಸುತ್ತಿಹುದು, ಕಾರ್ಮಿಕವಾವುದು? ಪುಣ್ಯಪಾಪಂಗಳೆಂದು ಹೆಸರಾಗಿ ಸುಖದುಃಖಂಗಳಾಗಿಹುದು. ಮಹಾಮಾಯೆ ಯಾವುದು? ಪಂಚಕರ್ತನು ರೂಪಾದಿ ದೇಹಾಗಿ ಪ್ರಪಂಚಗಳ ಪ್ರೇರಿಸಿಕೊಂಡಿಹುದು. ತಿರೋಧಾನಮಲವಾವುದು? ಮರಳಿ ಮಾಯಾಭೋಗದಲ್ಲಿ ಬಿದ್ದು ಹೊರಳಾಡಿಸುತ್ತಿಹುದು. ಈ ಪ್ರಕಾರದಲ್ಲಿ ಪಂಚಮಲಂಗಳನು ಅರಿವುದು ನೋಡಾ ಅಪ್ರಮಾಣಕೂಡಲಸಂಗಮದೇವಾ.