Index   ವಚನ - 783    Search  
 
ಆ ಸದ್ಗುರುಸ್ವಾಮಿ ಸದ್ಯೋಜಾತವಾಮದೇವಮುಖದಲ್ಲಿ ಅಘೋರ ತತ್ಪುರುಷ ಈಶಾನವೆಂಬ ಪಂಚಕಳಸವನಿರಿಸಿ, ಆ ಶಿಷ್ಯನನು ಗಣತಿಂತಿಣಿಗೆ ದೀರ್ಘದಂಡನಮಸ್ಕಾರವಂ ಮಾಡಿಸಿ ಪೂರ್ವಜನ್ಮವಂ ಕಳೆದು ಪುನರ್ಜಾತನಂ ಮಾಡಿ, ಆ ಶಿಷ್ಯನ ಮಸ್ತಕದ ಮೇಲೆ ತಮ್ಮ ಹಸ್ತಕಮಲವನಿರಿಸಿ, ಬ್ರಹ್ಮರಂಧ್ರದ ಚಿತ್ಪ್ರಭಾಕಳೆಯಂ ತೆಗೆದು ಆ ಕುಮಾರನ ಠಾವಿನಮೇಲೆ ಆಹ್ವಾನವಂ ಮಾಡಿ ಇಷ್ಟಲಿಂಗವಂ ಕರಸ್ಥಲದಲ್ಲಿ ಕೊಟ್ಟು, ಕರ್ಣದ್ವಾರದಲ್ಲಿ ಮಂತ್ರೋಪದೇಶವಂ ಮಾಡಿ, ಗಣಸಾಕ್ಷಿಯಾಗಿ ದೀಯೆಂಬ ಮಹಾಜ್ಞಾನಮಂ ಕೊಟ್ಟು ಕ್ಷ ಎಂಬ ಮಲತ್ರಯಂಗಳ ಬಿಡಿಸಿ, ಸದ್ಗುರುಸ್ವಾಮಿ ಗುರುಲಿಂಗಜಂಗಮವಂ ಮಾಡಿದ ಬಳಿಕ ತಿರುಗಿ ಆ ಮಲತ್ರಯಂಗಳ ಹಿಡಿದರೆ ಆ ಗುರುಲಿಂಗ ಜಂಗಮಕ್ಕೆ ರೌರವನರಕವೆಂದುದು ನೋಡಾ. ಇದಕ್ಕೆ ವೀರಾಗಮೇ: ದೀಯತೇ ಜ್ಞಾನಸಂಬಂಧಂ ಕ್ಷೀಯತೇ ಚ ಮಲತ್ರಯಂ | ದೀಯತೇ ಕ್ಷೀಯತೇ ಚೈವ ದೀಕ್ಷಾಶಬ್ದೋಭಿಧೀಯತೇ || ತನ್ಮಲತ್ರಯಸಂಯೋಗಾತ್ ಗುರೂಣಾಂ ಜಂಗಮ ಸ್ತಥಾ | ದ್ವಿವಿಧ ನರಕಂ ಯಾತಿ ಯಾವಚ್ಚಂದ್ರದಿವಾಕರೌಃ ||'' ಮಲತ್ರಯಂಗಳ ಬಿಟ್ಟು ಸುಳಿವ ಮಹಾಗುರುಲಿಂಗಜಂಗಮಕ್ಕೆ ನಮೋ ನಮೋ ನಮೋ ಎಂದು ಬದುಕಿದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.