Index   ವಚನ - 813    Search  
 
ಅನೇಕ ವೇದಾಗಮಶಾಸ್ತ್ರಪುರಾಣವನೋದಿ ಕೇಳಿದಡೇನು? ಮನದ ಕತ್ತಲೆ ಹರಿಯದು ನೋಡಾ. ಓಂಕಾರವೆಂಬ ಕಂಬದ ಮೇಲೆ ಮನ ಬುದ್ದಿ ಚಿತ್ತ ಅಹಂಕಾರವೆಂಬ ಪಣಿತೆಯನಿಡಿಸಿ, ಅಷ್ಟಮದವೆಂಬ ಬತ್ತಿಯ ತೀವಿ, ಜ್ಞಾನೇಂದ್ರಿಯ ಕರ್ಮೆಂದ್ರಿಯವೆಂಬ ತೈಲವನೆರೆದು, ಜ್ಞಾನಾಗ್ನಿಯ ಮುಟ್ಟಿಸಿ, ಸ್ವಯಂಪ್ರಕಾಶವ ಬೆಳಗುವದು ನೋಡಾ. ಅನಂತಕೋಟಿ ಸೂರ್ಯ-ಚಂದ್ರಾಗ್ನಿಮಯವಾಗಿ ಮಹಾಜ್ಯೋತಿ ಬೆಳಗುತ್ತಿಹುದು. ಆ ಮಹಾಜ್ಯೋತಿಪ್ರಕಾಶದಲ್ಲಿ ಆಣವ ಮಾಯಾ ಕಾರ್ಮಿಕವೆಂಬ ಹುಳುಗಳು ಬಿದ್ದು ಸತ್ತವು. ಹೃದಯದ ಕತ್ತಲೆ ಹರಿಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.