ಅನಾದಿ ಗಣೇಶ್ವರನ ನೆನಹುಮಾತ್ರದಲ್ಲಿ
ಮೂರು ಹುಲಿ ಹುಟ್ಟಿತ್ತು ನೋಡಾ.
ಒಂದು ಹುಲಿಗೆ ಆರುಮುಖ
ಒಂದು ಹುಲಿಗೆ ನಾಲ್ಕು ಮುಖ
ಎರಡು ಹುಲಿಯು ನೆಗೆದಾಡುತ್ತಿಹುದು ನೋಡಾ,
ಆ ಎರಡು ಹುಲಿಯು ನೆಗೆದಾಡುವುದ ಕಂಡು
ಆ ನಾಲ್ಕುಮುಖದ ಹುಲಿ ಆ ಎರಡು ಹುಲಿಯನು
ನುಂಗಿ ನುಂಗಿ ಉಗುಳಿತ್ತು ನೋಡಾ.
ಆ ಆರುಮುಖದ ಹುಲಿಗಳೆರಡು ಕೂಡಿ
ಆ ನಾಲ್ಕು ಮುಖದ ಹುಲಿಯ ನುಂಗಿ ಉಗುಳಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ.