Index   ವಚನ - 892    Search  
 
ತತ್ವಮೂರರಾದಿಯನರಿದು, ಮೂರರೊಳಗೆ ಮೂವತ್ತಾರುತತ್ತ್ವವ ಭೇದಿಸಿ, ಆ ಮೂವತ್ತಾರುತತ್ತ್ವದೊಳಗೆ ತ್ವಂಪದ ತತ್ಪದ ಅಸಿಪದಂಗಳನರಿದು, ಅಕಾರ ಉಕಾರ ಮಕಾರವ ತಿಳಿದು, ತ್ವಂಪದ ತತ್ಪದ ಅಸಿಪದಂಗಳ ಅಕಾರ ಉಕಾರ ಮಕಾರದಲ್ಲಿ ಅಡಗಿಸಿ, ಆ ಪ್ರಣವದ ಶಿರೋಮಧ್ಯದಲ್ಲಿಹುದೆ ಜ್ಯೋತಿರ್ಮಯಲಿಂಗ, ಆ ಜ್ಯೋತಿರ್ಮಯಲಿಂಗವನರಿದ ಶರಣ ಜ್ಞಾನಿಯೆಂಬೆನೆ ಜ್ಞಾನಿಯಲ್ಲ, ಅಜ್ಞಾನಿಯೆಂಬೆನೆ ಅದಕ್ಕೆ ಮುನ್ನವೆ ಅಲ್ಲ , ದ್ವೈತಿಯೆಂಬೆನೆ ದ್ವೈತಿಯಲ್ಲ, ಅದ್ವೈತಿಯೆಂಬೆನೆ ಅದ್ವೈತಿಯಲ್ಲ, ಶೂನ್ಯನೆಂಬೆನೆ ಶೂನ್ಯನಲ್ಲ, ನಿಶ್ಶೂನ್ಯನೆಂಬೆನೆ ನಿಶ್ಶೂನ್ಯನಲ್ಲ. ನಿಮ್ಮ ಶರಣನ ನಿಲವ ನೀನೆ ಬಲ್ಲೆಯಯ್ಯಾ ಅಪ್ರಮಾಣಕೂಡಲಸಂಗಮದೇವಾ.