Index   ವಚನ - 12    Search  
 
ಅರುವತ್ತಾರುತತ್ವಂಗಳ ಮೇಲೆ ನಿನ್ನ ಅರಿವವರಿಲ್ಲ. ಮೂವತ್ತಾರುತತ್ವಂಗಳ ಮೇಲೆ ನೀನು ರಚ್ಚೆಗೆ ಬಂದವನಲ್ಲ. ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ ಮರ್ತ್ಯಕ್ಕೆ ಬಂದವನಲ್ಲ. ಅನಾದಿಯಿಂದ ಅತ್ತಲಾದ ಬಸವನಭಕ್ತಿಯ ನೋಡಲೆಂದು ಬಂದವನಲ್ಲದೆ ಮಾಯಾವಾದದಿಂದ ಮರ್ತ್ಯಕ್ಕೆ ಬಂದನೆಂದು ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು. ಹೊಟ್ಟೆಯ ಸೀಳಿ, ಮುಳ್ಳಿನ ರೊಂಪೆಯ ಮಡಗುವೆನು! ಅದೇನು ಕಾರಣವೆಂದಡೆ : ಬಸವಣ್ಣಂಗೆ ಭಕ್ತಿಯ ತೋರಲೆಂದು, ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು, ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ, ಬೊಂತಲಾದೇವಿ ಇಂತಿವರಿಗೆ ಸ್ವತಂತ್ರವ ತೋರಲೆಂದು ಬಂದೆಯಲ್ಲಾ. ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವ ತೋರದೆ ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ.