ಗುರುವೆಂಬೆನೆ, ಗುರುವು ನರನು;
ಲಿಂಗವೆಂಬೆನೆ, ಲಿಂಗವು ಕಲ್ಲು;
ಜಂಗಮವೆಂಬೆನೆ, ಜಂಗಮವು ಆತ್ಮನು;
ಪಾದೋದಕವೆಂಬೆನೆ, ಪಾದೋದಕ ನೀರು;
ಪ್ರಸಾದವೆಂಬೆನೆ, ಪ್ರಸಾದ ಓಗರ.
ಇಂತೆಂದುದಾಗಿ,
ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧವ ಹಿಡಿದ ಕಾರಣ,
ಗುರುವೆಂಬವನು ನರನು.
ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಒಳಗಾದ ಕಾರಣ,
ಲಿಂಗವೆಂಬುದು ಕಲ್ಲು.
ಆಶೆಪಾಶೆಗೆ ಒಳಗಾದ ಕಾರಣ,
ಜಂಗಮವೆಂಬುದು ಆತ್ಮನು.
ಲಾಂಛನಿಗಳೆಂದು ಕಾಂಚನಕ್ಕೆ ಕೈಯಾನುವರಲ್ಲಿ
ಪಾದೋದಕ ಪ್ರಸಾದವೆಂದು ಕೊಂಡೆನಾದಡೆ
ಕೆಸರಿನೊಳಗೆ ಬಿದ್ದ ಪಶುವಿನಂತೆ ಆಯಿತ್ತು
ಕಾಣಾ ಅಮುಗೇಶ್ವರಾ.