Index   ವಚನ - 4    Search  
 
ಆಗಮ ನಿಗಮ ಶಾಸ್ತ್ರ ಪುರಾಣವೆಂಬ ಅಂಧಕನ ಕೈಗೆ ಕೋಲಕೊಟ್ಟು ನಡೆಸಿಕೊಂಡು ಹೋಗುವಾಗ, ತನ್ನ ಕಣ್ಣುಗೆಟ್ಟಡೆ ಮುಂದಕ್ಕೆ ಗಮನವಿಲ್ಲ. ಹಿಂದಕ್ಕೆ ತಿರುಗಲರಿಯದೆ, ಎರಡಕ್ಕೆ ಕೆಟ್ಟ ಜಂಬುಕನಂತೆ ಆಯಿತ್ತು ನೋಡಾ. ಸಜ್ಜನ ಗಂಡನ ಕದ್ದು, ಕಳ್ಳನ ಹಿಂದೆ ಹೋದ ಸತಿಯಂತೆ ಆದರಲ್ಲಾ. ಸಂತೆಯಲ್ಲಿ ಗುಡಿಸಲನಿಕ್ಕಿ ಹಡೆದುಂಬ ಸೂಳೆಯಂತೆ, ಮನವೆ ಸೂಳೆಯಾಗಿ, ಮಾತಿನ ಮಾಲೆಯ ಸರವನಿಕ್ಕಿಕೊಂಡು, ವಾಚಾಳಿಗತನದಿಂದ ಒಡಲ ಹೊರೆವವರೆಲ್ಲರೂ ಶರಣರಪ್ಪರೆ ? ಅಲ್ಲಲ್ಲ. ಅದೆಂತೆಂದಡೆ: ತನು ಕರಗಿ, ಮನ ಪುಳಕವಾದ ಮಹಾಮಹಿಮರಿಗಲ್ಲದೆ ಉಚ್ಚಿಯ ಬಚ್ಚಲಲ್ಲಿ ಓಲಾಡುವ ತೂತಜ್ಞಾನಿಗಳಿಗೆಂತಪ್ಪದು ಹೇಳಾ ? ಕಾಲಾಳು ಆಕಾಶವನಡರಿಹೆನೆಂಬ ಪರಿಯೆಂತೊ ? ಬ್ರಹ್ಮಪುರ ವೈಕುಂಠ ರುದ್ರಪುರ ಅಷ್ಟಾದಿ ಕೈಲಾಸವೆಂಬ ಈ ಪಂಚಗ್ರಾಮಂಗಳ ವರ್ಮ ಕರ್ಮವಳಿದ ಮಹಾದೇವಂಗಲ್ಲದೆ ಮುಂದಕ್ಕೆ ಅಡಿಯಿಡಬಾರದು. ಪಿಪೀಲಿಕ ಕಪಿಯ ಮತವೆಂಬ ಪಥ ಮೀರಿ, ವಿಹಂಗವೆಂಬ ವಾಹನಮಂ ಏರಿ, ಬ್ರಹ್ಮಾಂಡಕ್ಕೆ ದಾಳಿ ಮಾಡಿ, ಸುವರ್ಣಪುರಮಂ ಸುಟ್ಟು ಸೂರೆಗೊಂಡ ಮಹಾನುಭಾವಿಗಳ ತೋರಿ ಬದುಕಿಸಾ. ನಿಜಗುರು ಭೋಗೇಶ್ವರಾ, ನಾ ನಿಮ್ಮ ಧರ್ಮವ ಬೇಡಿಕೊಂಬೆ.