Index   ವಚನ - 8    Search  
 
ಕಂಗಳ ತಿರುಳನುರುಹಿ, ಆದಿಯ ಬೀಜವ ವೇದವರಿಯಲ್ಲಿ ಸುಟ್ಟು, ಆ ಭಸ್ಮವ ಹಣೆಯಲ್ಲಿ ಧರಿಸಿ, ಅರಳಿಯ ಮರದೊಳಗಾಡುವ ಗಿಳಿಯ ಎಲೆ ನುಂಗಿತ್ತ ಕಂಡೆ. ಅರಳಿ ಹೂವಾಯಿತ್ತು, ಫಲ ನಷ್ಟವಾಯಿತ್ತು ನೋಡಾ. ಎಲೆ ಉದುರಿತ್ತು, ಆ ಮರದ ಮೊದಲಲ್ಲಿಗೆ ಕಿಚ್ಚನಿಕ್ಕಿ, ಬ್ರಹ್ಮನ ತಲೆಯಲ್ಲಿ ಬೆಣ್ಣೆಯ ಬೆಟ್ಟ ರುದ್ರಲೋಕಕ್ಕೆ ದಾಳಿ ಮಾಡಿ, ಗ್ರಾಮದ ಮಧ್ಯದೊಳಗೊಂದು ಕೊಂಡವ ಸುಟ್ಟು, ಯಜ್ಞ ಪುರುಷನ ಹಿಡಿದು, ಕೈ ಸಂಕಲೆಯನಿಕ್ಕಿ, ಗಂಗೆವಾಳುಕರಿಗೆ ಕೈವಲ್ಯವನಿತ್ತು, ಅಷ್ಟಮೂರ್ತಿಯೆಂಬ ನಾಮವ ನಷ್ಟವ ಮಾಡಿ, ವಿಶ್ವಮೂರ್ತಿಯ ಪಾಶವಂ ಪರಿದು, ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿ, ರುದ್ರಲೋಕಕ್ಕೆ ದಾಳಿ ಮಾಡಿ, ಆ ಮೂರ್ತಿಗಣೇಶ್ವರರಿಗೆ ಐಕ್ಯಪದವನಿತ್ತು, ಬಟ್ಟಬಯಲ ಕಟ್ಟಕಡೆಯೆನಿಪ ಸಿದ್ಧ ನಿಜಗುರು ಭೋಗಸಂಗನಲ್ಲಿ ಸಯವಾದ ಅಲ್ಲಮ ಅಜಗಣ್ಣ ಚೆನ್ನಬಸವ ಬಸವರಾಜ ಮುಖ್ಯವಾದ ಲಿಂಗಾಂಗಿಗಳ ಪಾದಕ್ಕೆ ನಮೋ ನಮೋ ಎಂದು ಬದುಕಿದೆ.