Index   ವಚನ - 7    Search  
 
ಇದ್ದು ಜೀವನಲ್ಲ, ಸತ್ತು ಹೆಣನಲ್ಲ. ಕತ್ತಲೆ ಮುಟ್ಟಿದ ಬೆಳಗಿನಲ್ಲಿ ಸುಳಿಯದು. ಹಿಂದಾದಡೆ ಏರುವುದು, ಮುಂದಾದಡೆ ತೋರುವುದು. ಹಿಡಿಯಲ್ಲ ಕರಿಯಲ್ಲ. ಇಕ್ಕಿದ ಹೆಜ್ಜೆಯ ತೆಗೆಯದು. ಮೊನೆಗೆ ನಿಲ್ಲದು, ತೆಕ್ಕೆಗೆ ಬಾರದು. ಕಾದಬಂದ ಕಲಿಗಳನೆಲ್ಲರ ಅಗಿದಗಿದು ನುಂಗಿತ್ತು ನೋಡಾ. ಅರಿದೆಹೆನೆಂದಡೆ ಅರಿಯಬಾರದು. ಇದ ಬಲ್ಲವರಾರಯ್ಯಾ ? ಇಹಪರ ನಷ್ಟವಾದ ಮಹಾವೀರಧೀರರಿಗಲ್ಲದೆ ಮುಕ್ತಿಗೆ ದೂರವಾದ ಲಿಂಗಾಂಗಿಗಳ ನೆನಹೆಂಬ ಜೋಡಂ ತೊಟ್ಟು, ಅವರ ಕರಣಪ್ರಸಾದವೆಂಬ ವಜ್ರ ಘಟಿಕೆಯ ಧರಿಸಿ, ಗುರುಕರುಣವೆಂಬ ಅಲಗಂ ಪಿಡಿದು, ಮುಂಡ ಬಿದ್ದಡೂ ತಲೆಯಲ್ಲಿರಿವೆ. ನಿಜಗುರು ಭೋಗೇಶ್ವರಾ ನಾ ನಿಮ್ಮ ಬೇಡುವನಲ್ಲಾ.