Index   ವಚನ - 11    Search  
 
ಗಮ್ಯಾಗಮ್ಯಗಳಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಬೀಜಕ್ಷೇತ್ರಗಳಿಲ್ಲದಂದು, ನಾದದ ಮೊದಲಂಕುರ ತಲೆದೋರದಂದು, ಪಂಚಬ್ರಹ್ಮರ ಜನನವಿಲ್ಲದಂದು, ಪಂಚಾಕಾಶ ತಲೆದೋರದಂದು, ಪಂಚಭೂತಿಕ ಸಪ್ತಸಾಗರ ಅಷ್ಟಕುಲಪರ್ವತ ಚತುರ್ದಶಭುವನ ರಚನೆಗೆ ಬಾರದಂದು, ಇವರೆಲ್ಲರ ತಾಯಿ ತಂದೆ ಹುಟ್ಟದ ಮುನ್ನವೆ ಹುಟ್ಟಿಪ್ಪಳೆಮ್ಮವ್ವೆ. ಆಕೆಯ ಭಾವದ ಕೊನೆಯ ಮೊನೆಯ ಮೇಲೆ ಇಲ್ಲದೆಯಿಪ್ಪ ಎಮ್ಮಯ್ಯನು. ಇವರಿಬ್ಬರಿಗೆ ಸಂಗವಿಲ್ಲದಲ್ಲಿ ಹುಟ್ಟಿದೆ ನಾನು. ಅವರಿಬ್ಬರಿಗೂ ಮದುವೆಯ ಮಾಡಿದನಯ್ಯಾ. ಅವರಿಬ್ಬರ ಸಂಗದಿಂದ ಹುಟ್ಟು ಹೊಂದು, ಕಣ್ಣು ಕಾಲಿಲ್ಲದ, ಕಿವಿ ಮೂಗಿಲ್ಲದ, ಕೈ ಬಾಯಿಲ್ಲದ ಒಂದು ಶಿಶು ಹುಟ್ಟಿತ್ತು. [ಆ] ಮಗನನೆನಗೆ ಮದುವೆಯ ಮಾಡಿದರಯ್ಯಾ. ಅದ ನಾ ನೋಡುವಲ್ಲಿ ನೋಡಿಸಿದೆ, ನಾ ಕೇಳುವಲ್ಲಿ ಕೇಳಿಸಿದೆ, ನಾ ನುಡಿವಲ್ಲಿ ನುಡಿಸಿದೆ, ನಾನುಂಬಲ್ಲಿ ಉಣಿಸಿದೆ, ನಾ ವಾಸಿಸುವಲ್ಲಿ ವಾಸಿಸಿದೆ, ನಾ ಸೋಂಕುವಲ್ಲಿ ಸೋಂಕಿಸಿದೆ, ನಾ ನೆನೆವಲ್ಲಿ ನೆನೆಸಿದೆ. ಎನ್ನ ತೋಳು ತೊಡೆಯ ಮೇಲೆ ಬೆಳೆದು, ಯೌವನ ಪ್ರಾಯವಾಗಿ, ಎನ್ನ ದಶಾವಸ್ಥೆಯ ಮೋಹದಿಂದ, ಎನ್ನ ನೆರೆವ ಭರವಸದಿಂದ ಹೆಣ್ಣು ಗಂಡಾಗಿ, ಎನ್ನನವಗವಿಸಿಕೊಂಡಿತ್ತಯ್ಯಾ. ನಾ ನೋಡದ ಮುನ್ನವೇ ನೋಡಿತ್ತು. ನಾ ಕೇಳದ ಮುನ್ನವೇ ಕೇಳಿತ್ತು. ನಾ ನುಡಿಯದ ಮುನ್ನವೇ ನುಡಿಯಿತ್ತು. ನಾನುಣ್ಣದ ಮುನ್ನವೇ ಉಂಡಿತ್ತು. ನಾ ವಾಸಿಸದ ಮುನ್ನವೇ ವಾಸಿಸಿತ್ತು. ನಾ ಸೋಂಕದ ಮುನ್ನವೇ ಸೋಂಕಿತ್ತು. ನಾ ನೆನೆಯದ ಮುನ್ನವೇ ನೆನೆಯಿತ್ತು. ಇಂತೀ ಎನ್ನ ಸರ್ವಾಂಗವ ಶಿಖಿ ಕರ್ಪುರವನೊಳಕೊಂಡಂತೆ, ನಿಜಗುರು ಭೋಗೇಶ್ವರನು ಒಳಕೊಂಡನಾಗಿ ನಾನು ಸುಖಿಯಾದೆನು.