Index   ವಚನ - 21    Search  
 
ಶೂನ್ಯ ನಿಃಶೂನ್ಯಗಳಿಲ್ಲದಂದು, ಸುರಾಳ ನಿರಾಳವಿಲ್ಲದಂದು, ಬೆಳಗು ಕತ್ತಲೆಯಿಲ್ಲದಂದು, ಮಹಾಬೆಳಗಿನ ನಿಜಪ್ರಕಾಶವೇ ಗಟ್ಟಿಗೊಂಡು ಮೂರ್ತಿಗೊಂಡಿಪ್ಪಲ್ಲಿ, ಅಜಾತನೆಂಬ ಶ್ರೀಗುರುವಿನ ಜಾತವು. ಕಂಗಳು ಬೆಳಗಿಸಲಾಗಿ ಪುನೀತನಾಗಿ, ಶಿಷ್ಯನು ದೇವಕರ್ಮವ ಭಕ್ತಿ ವೈರಾಗ್ಯಮಂ ಮಾಡಬೇಕೆನಲು, ಆ ಶಿಷ್ಯನ ಮನೋಭಾವದಿ ಕಾರುಣ್ಯ ಪುಟ್ಟಿ, ಕರಕ್ಕೆ ಲಿಂಗವಾದ ಆ ಶಿಷ್ಯನ ಕೈಯಲ್ಲಿ ಅಷ್ಟವಿಧಾರ್ಚನೆ ಷೋಡಷೋಪಚಾರದಲ್ಲಿ ಪೂಜಿಸಿಕೊಳಬೇಕಾಗಿ ಜಂಗಮವಾದ. ಇಂತೀ ಗುರುಲಿಂಗಜಂಗಮವೆಂಬ ತ್ರಿವಿಧವೂ ಶಿಷ್ಯನಿಂದಾಯಿತ್ತಲ್ಲದೆ ಆ ಶಿಷ್ಯ ತನ್ನಿಂದ ತಾನಾದ ನಿರಾಲಂಬನು. ಅದೆಂತೆಂದಡೆ: ಹೆತ್ತ ತಂದೆಗಳು ಶಿಶುವಿಗೆ ನಾಮಕರಣವನಿಕ್ಕಿ ಹಲವಂದದಲ್ಲಿ ಕರೆದು ತೋರುವಂತೆ, ಗುರುಲಿಂಗ ಶಿವಲಿಂಗ ಜಂಗಮಲಿಂಗ ಸದ್ಗುರುವೆ ಮದ್ಗುರುವೆ ಘನಗುರುವೆ ಎಂದು ಪೆಸರಿಟ್ಟು ಕರೆದು, ತನ್ನ ಒಕ್ಕಮಿಕ್ಕ ಪ್ರಸಾದವನಿಕ್ಕಿದ ಕಾರಣ, ನಿನ್ನ ಪೂರ್ವಾಶ್ರಯವಳಿದು ಸಕಲದೇವರಿಗೆ ದೇವನಾದೆ. ಅದಕ್ಕೆ ಮುನ್ನ ನಿಮ್ಮ ಪೆಸರೇನೆಂದು ಹೇಳಾ ನಿಜಗುರು ಭೋಗೇಶ್ವರಾ.