Index   ವಚನ - 26    Search  
 
ಅಯ್ಯಾ, ತನ್ನಾದಿ ಮಧ್ಯಾವಸಾನವ ತಿಳಿದು, ಭವಿ ಭಕ್ತ, ಆಚಾರ ಅನಾಚಾರ, ಯೋಗ್ಯ ಅಯೋಗ್ಯ, ಅರ್ಪಿತ ಅನರ್ಪಿತ, ಸುಸಂಗ ದುಸ್ಸಂಗ, ಸುಚಿತ್ತ ಕುಚಿತ್ತ, ಸುಬುದ್ಧಿ ಕುಬುದ್ಧಿ, ಅಹಂಕಾರ ನಿರಹಂಕಾರ, ಸುಮನ ಕುಮನ, ಸುಜ್ಞಾನ ಅಜ್ಞಾನ, ಸದ್ಭಾವ ದುರ್ಭಾವ, ಪಾಪ ಪುಣ್ಯ, ಧರ್ಮ ಕರ್ಮ, ಸ್ವರ್ಗ ನರಕ, ಇಹಪರವೆಂಬ ಭೇದಾಭೇದವ ತಿಳಿದು, ಶೈವಮಾರ್ಗದಷ್ಟಾಂಗಯೋಗವನುಳಿದು, ವೀರಶೈವ ಶಿವಯೋಗಸಂಪನ್ನನಾಗಿ ಭಕ್ತಿ ಜ್ಞಾನ ವೈರಾಗ್ಯದಲ್ಲಾಚರಿಸಿ, ಬಕಧ್ಯಾನವನುಳಿದು, ರಾಜಹಂಸನ ಹಾಗೆ ಅಸತ್ಯವನುಳಿದು, ಸುಸತ್ಯದಲ್ಲಾಚರಿಸುವ ಭಕ್ತ ಜಂಗಮವೇ ದ್ವಿತೀಯ ಶಂಭುವೆಂದು ಅವರಂಗಣವ ಕಾಯ್ದು, ಅವರುಟ್ಟುದ ತೊಳೆದು, ಅವರೊಕ್ಕುದ ಕೈಕೊಂಡು, ಅವರುಗಳ ಹಾರೈಸಿ, ಅವರ ಕಡೆಬಾಗಿಲ ಕಾಯ್ದು, ಅವರ ತೊತ್ತಿನ ತೊತ್ತಾಗಿ ಬದುಕಿದೆ ಕಾಣಾ, ಕಲಿದೇವರದೇವ.