Index   ವಚನ - 197    Search  
 
ದೇಶಾಂತರಿ ದೇಶಾಂತರಿಯೆಂದು ನುಡಿವ ಹುಸಿಭ್ರಷ್ಟರನೇನೆಂಬೆನಯ್ಯಾ. 'ಏಕಮೂರ್ತಿಸ್ತ್ರಯೋ ಭಾಗಃ ಗುರುರ್ಲಿಂಗಂತ ಜಂಗಮಃ' ಎಂಬುದನರಿಯದೆ, ದೇಶಾಂತರಿಯೆಂದರೆ ಆರು ಮೆಚ್ಚುವರಯ್ಯ? ಸುಮ್ಮನಿರಿ ಭೋ, ಬರುಕಾಯರುಗಳಿರಾ. ದೇಶಾಂತರಿಯಾದರೆ ಮೂರುಲೋಕದ ಕರ್ತನಂತೆ ಶಾಂತನಾಗಿರಬೇಕು. ಜಲದಂತೆ ಶೈತ್ಯವ ತಾಳಿರಬೇಕು. ಸೂರ್ಯನಂತೆ ಸರ್ವರಲ್ಲಿ ಪ್ರಭೆ ಸೂಸುತ್ತಿರಬೇಕು. ಪೃಥ್ವಿಯಂತೆ ಸರ್ವರ ಭಾರವ ತಾಳಿರಬೇಕು. ಹೀಂಗಾದಡೆ ಮಹಂತಿನ ಕೂಡಲದೇವರೆಂಬೆನಯ್ಯ. ಹೀಂಗಲ್ಲದೆ ತ್ರಿವಿಧ ಮಲಗಳ ಭುಂಜಿಸುತ್ತ, ಗುರುಲಿಂಗಜಂಗಮಕ್ಕೆ ತನುಮನಧನ ಸವೆಯದೆ, ತಾವೇ ದೇವರೆಂದು, ತಮ್ಮ ಉದರವ ಹೊರೆವ ಶ್ವಾನ ಸೂಕರನಂತೆ, ಪ್ರಪಂಚಿನ ಗರ್ವಿಗಳ, ದೇಶಾಂತರ, ಮಹಂತರೆನಬಹುದೇನಯ್ಯ? ಎನಲಾಗದು ಕಾಣಾ, ಕಲಿದೇವರದೇವ.