Index   ವಚನ - 204    Search  
 
ನಾವು ಪ್ರಾಣಲಿಂಗಿಗಳೆಂದು ಹೇಳುವ ಅಣ್ಣಗಳಿರಾ, ನೀವು ಪ್ರಾಣಲಿಂಗಿಗಳು ಎಂತಾದಿರಿ ಹೇಳಿರಣ್ಣ? ಅರಿಯದಿರ್ದಡೆ ಕೇಳಿರಣ್ಣ, ಪ್ರಾಣಲಿಂಗವಾದ ಭೇದಾಭೇದವ. ಕಾಯದ ಕಳವಳದಲ್ಲಿ ಕೂಡದೆ, ಮನದ ಭ್ರಾಂತಿಗೊಳಗಾಗದೆ, ಕರಣಂಗಳ ಮೋಹಕ್ಕೀಡಾಗದೆ, ಪ್ರಾಣನ ಪ್ರಪಂಚಿನಲ್ಲಿ ಬೆರೆಯದೆ, ಜೀವನ ಬುದ್ಧಿಯಲ್ಲಿ ಮೋಹಿಸದೆ, ಹಂಸನ ಆಸೆಗೊಳಗಾಗದೆ ನಿಷ್ಪ್ರಪಂಚಿಯಾಗಿ, ಗುರುಲಿಂಗಜಂಗಮದ ಪಾದೋದಕಪ್ರಸಾದದಲ್ಲಿ ಅತಿಕಾಂಕ್ಷೆವುಳ್ಳಾತನಾಗಿ, ತ್ರಿವಿಧಲಿಂಗದಲ್ಲಿ ಸೂಜಿಗಲ್ಲಿನಂತೆ, ಎರಕತ್ವವುಳ್ಳಾತನಾಗಿಪ್ಪಾತನೆ ಲಿಂಗಪ್ರಾಣಿ ನೋಡಾ, ಕಲಿದೇವಯ್ಯ.