Index   ವಚನ - 215    Search  
 
ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ. ಅಕ್ಕನಾಗಾಯಿ ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ ಮೊಗವಾಡದ ಕೇಶಿರಾಜ ಕೋಲಶಾಂತಯ್ಯ ಮೊದಲಾದ ಶಿವಗಣಂಗಳೆಲ್ಲರೂ ಬಸವರಾಜನ ಬಯಲ ಬೆರಸಿದರು. ಆ ಬಯಲ ಪ್ರಸಾದದಿಂದ, ನಿರುಪಮ ಪ್ರಭುದೇವರು ಕದಳಿಯಲ್ಲಿ ಬಯಲಾದರು. ಆ ಬಯಲ ಪ್ರಸಾದದಿಂದ, ಮೋಳಿಗೆಯ ಮಾರಯ್ಯ ಕಕ್ಕಯ್ಯ ಪಡಿಹಾರಿ ಉತ್ತಣ್ಣ ಕನ್ನದ ಮಾರಣ್ಣ ಕಲಕೇತ ಬೊಮ್ಮಣ್ಣ ನುಲಿಯ ಚಂದಯ್ಯ ಹೆಂಡದ ಮಾರಯ್ಯ ಶಂಕರ ದಾಸಿಮಯ್ಯ ಏಕಾಂತ ರಾಮಯ್ಯ ಮೇದರ ಕೇತಯ್ಯ ಮೊದಲಾದ ಏಳುನೂರೆಪ್ಪತ್ತು ಅಮರಗಣಂಗಳ ದಂಡು, ಕೈಲಾಸಕ್ಕೆ ನಡೆಯಿತ್ತು, ಬಂದ ಮಣಿಹ ಪೂರೈಸಿತ್ತು. ಸಂದ ಪುರಾತನರೆಲ್ಲರು ಎನ್ನ ಮನದ ಮೈಲಿಗೆಯ ಕಳೆದ ಕಾರಣ, ಕಲಿದೇವರದೇವಯ್ಯಾ, ಇವರೆಲ್ಲರ ಒಕ್ಕಮಿಕ್ಕಪ್ರಸಾದದ ಬಯಲು ಎನಗಾಯಿತ್ತು.